ಬೆಂಗಳೂರು, ಜು.13-ಗ್ರಾಮೀಣ ಭಾಗದ ಜನರು ಹಾಗೂ ರೈತರು ಪ್ರಾಣ ಹೋದರೂ ಕೂಡ ಗಾಂಜಾ ಬೆಳೆಯುವುದಿಲ್ಲ ಎಂದು ಸಭಾಧ್ಯಕ್ಷ ರಮೇಶ್ಕುಮಾರ್ ವಿಧಾನಸಭೆಗೆ ತಿಳಿಸಿದರು.
ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಅಲ್ಪಕಾಲಾವಧಿ ಚರ್ಚೆ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷರು, ಯಾವ ರೈತರು ಕೂಡ ಗಾಂಜಾ ಬೆಳೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ಕೋಟೆಶಾಲೆ, ಮಹಾನಗರ ಪಾಲಿಕೆ ಶಾಲೆಯಲ್ಲಿ ಗಾಂಜಾ, ಡ್ರಗ್ಸ್ ಮಾರಾಟ ಆಗುತ್ತಿದೆಯೇ ಎಂದು ಪ್ರಶ್ನಿಸಿ, ಅಲ್ಲಿನ ಮಕ್ಕಳಿಗೆ ತಿನ್ನಲು ಊಟನೂ ಇರೋದಿಲ್ಲ. ಪ್ರತಿಷ್ಠಿತ ಶಾಲೆಗಳ ಬಳಿ ಡ್ರಗ್ಸ್ ಮಾರಾಟ ಆಗೋದು. ಏಕೆಂದರೆ ಪ್ರತಿಷ್ಠೆಯ ವಿಚಾರ. ಹಣವನ್ನು ಹೇಗೆ ಮಾಡುತ್ತಾರೆ ಎಂಬುದು ಮುಖ್ಯ ಅಲ್ಲ. ಹೆಚ್ಚು ಆಭರಣ ಹಾಕಿದರೆ, ದೊಡ್ಡ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿದರೆ ಗೌರವ ಹೆಚ್ಚುತ್ತದೆ ಎಂಬ ಭಾವನೆ ಇದೆ. ಅದೇ ರೀತಿ ಪ್ರತಿಷ್ಠಿತ ಶಾಲೆಗಳಲ್ಲಿ ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಬೆಳಗ್ಗೆ ಹೋದ ಮಕ್ಕಳು ಸಂಜೆ ವಾಲಾಡಿಕೊಂಡು ಬಂದರೆ ತಂದೆ-ತಾಯಿಗೆ ಗೌರವ ಎಂಬ ಭಾವನೆ ಇದೆ. ನಮ್ಮೂರಲ್ಲಿ ಗಾಂಜಾ ಮಾರಾಟ ಮಾಡಿದರೆ ಯಾರು ತೆಗೆದುಕೊಳ್ಳುತ್ತಾರೆ. ನಗರ ಪ್ರದೇಶದಲ್ಲಿ ಡ್ರಗ್ಸ್ ಜಾಲ ಹರಡಿದ್ದು, ಇದನ್ನು ತಡೆಗಟ್ಟಲು ಉಪಯುಕ್ತ ಸಲಹೆ ನೀಡಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಆರ್.ಅಶೋಕ್, ರೈಲ್ವೆ ಸ್ಟೇಷನ್ನಲ್ಲಿ ಕೂಲಿ ಕೆಲಸ ಮಾಡುವವರೂ ಕೂಡ ಡ್ರಗ್ಸ್ ವ್ಯಸನಕ್ಕೆ ಒಳಗಾಗಿರುವುದು ಆಘಾತಕಾರಿ ಎಂದರು.