ಬೆಳ್ಳಂದೂರು ಕೆರೆ ಮಾಲಿನ್ಯ ಹೈಕೋರ್ಟ್ ವಾಗ್ದಾಳಿ

 

ಬೆಂಗಳೂರು, ಜು.13- ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಬೆಳ್ಳಂದೂರು ಕೆರೆ ಮಾಲೀನ್ಯ, ನೊರೆ ಮತ್ತು ಬೆಂಕಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಹೈಕೋರ್ಟ್, ಇಂದಿರಾಕ್ಯಾಂಟಿನ್ ಮೇಲಿರುವ ಆಸಕ್ತಿ ಮತ್ತು ಮುತುವರ್ಜಿ ನಗರದ ಕೆರೆಗಳ ಮೇಲೆ ಏಕಿಲ್ಲ ಎಂದು ಕಟುವಾಗಿ ಟೀಕಿಸಿದೆ.
ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಈ ಸಂಬಂಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೆಂಗಳೂರಿನ ಅಸಮರ್ಪಕ ಕಸ ವಿಲೇವಾರಿ ಮತ್ತು ಬೆಳ್ಳಂದೂರು ಕೆರೆ ಮಾಲಿನ್ಯದಿಂದ ವಿಶ್ವಮಟ್ಟದಲ್ಲಿ ನಗರಕ್ಕೆ ಅಪಖ್ಯಾತಿ ಬಂದಿದೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿತು.
ಮಾಲಿನ್ಯ ನಿಯಂತ್ರಣಕ್ಕೆ ಅನೇಕ ಸುಧಾರಿತ ತಂತ್ರಜ್ಞಾನಗಳಿವೆ. ಇವುಗಳನ್ನು ನೀವು ಏಕೆ ಬಳಸಿಕೊಂಡಿಲ್ಲ ಎಂದು ಕೋರ್ಟ್‍ನಲ್ಲಿ ಹಾಜರಿದ್ದ ಉನ್ನಾಧಿಕಾರಿಗಳಿಗೆ ನ್ಯಾಯಾಲಯ ಪ್ರಶ್ನಿಸಿತು.
ಬೆಂಗಳೂರು ಜಾಗತಿಕವಾಗಿ ಹೆಗ್ಗಳಿಕೆ ಪಡೆದಿದೆ. ಆದರೆ, ಪರಿಸರ ಮಾಲಿನ್ಯದಿಂದ ಉದ್ಯಾನನಗರಕ್ಕೆ ಕೆಟ್ಟ ಹೆಸರು ಬಂದಿದೆ. ಇದನ್ನು ತಡೆಗಟ್ಟಲು ನೀವು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.
ನಿನ್ನೆ ಹೈಕೋರ್ಟ್ ನೀಡಿದ್ದ ಸೂಚನೆ ಮೇರೆಗೆ ಇಂದು ಕೋರ್ಟ್‍ಗೆ ಖುದ್ದಾಗಿ ಹಾಜರಾಗಿದ್ದ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಆಯುಕ್ತ ರಾಜೇಂದ್ರಕುಮಾರ್ ಜೈನ್ ಮತ್ತು ಬಿಡಿಎ ಆಯುಕ್ತ ರಾಕೇಶ್‍ಸಿಂಗ್ ಕೆರೆ ಮಾಲಿನ್ಯ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕೆರೆ ತ್ಯಾಜ್ಯ ನಿರ್ವಹಣೆಗಾಗಿ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಈ ಅಧಿಕಾರಿಗಳು ಉತ್ತರಿಸಿದಾಗ, ಈ ಸಮಿತಿಯಲ್ಲಿ ಯಾರ್ಯಾರು ಇದ್ದಾರೆ ಎಂದು ಕೋರ್ಟ್ ಉತ್ತರ ಬಯಸಿತು.
ಐಎಎಂ ತಜ್ಞರು, ಪೆÇ್ರಫೆಸರ್‍ಗಳನ್ನು ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆ. ಸಾಕಷ್ಟು ಕೆರೆ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲಾಗಿದೆ. ತ್ಯಾಜ್ಯ ನೀರು ಕೆರೆಗೆ ಹರಿಯದಂತೆ ತಡೆಯಲಾಗಿದೆ. 2020 ವೇಳೆಗೆ ಕೆರೆಯನ್ನು ಸಂಪೂರ್ಣ ನಿರ್ವಹಣೆ ಮಾಡಲಾಗುವುದು ಎಂದು ಅಧಿಕಾರಿಗಳು ಕೋರ್ಟ್‍ಗೆ ಸ್ಪಷ್ಟೀಕರಣ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ