ಬೆಂಗಳೂರು, ಜು.13- ಬೆಂಗಳೂರಿನ ರೈ ತಾಂತ್ರಿಕ ವಿಶ್ವವಿದ್ಯಾಲಯ ಕೃಷಿ ಸಂಬಂಧಿಸಿದ ವಿಷಯಗಳನ್ನು ಬೋಧಿಸಲು ಕಡಿವಾಣ ಹಾಕುವ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಧ್ವನಿಮತದ ಅಂಗೀಕಾರ ಹಾಕಿತು.
2012ರಲ್ಲಿ ಜಾರಿಗೆ ತರಲಾದ ರೈ ತಾಂತ್ರಿಕ ವಿವಿ ಅಧಿನಿಯಮದಲ್ಲಿ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಿಸಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ವಿವಿ ಸರ್ಕಾರದ ಕೃಷಿ ವಿವಿಗೆ ಸರಿಸಮಾನವಾಗಿ ಕೃಷಿ ವಿಷಯಗಳನ್ನು ಬೋಧಿಸಲು ಆರಂಭಿಸಿತ್ತು. ಇದನ್ನು ವಿರೋಧಿಶಿ ಶಿವಮೊಗ್ಗ ಇತರೆ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿಷಯಗಳನ್ನಷೇ ಬೋಧಿಸಬೇಕು. ಕೃಷಿ ಮತ್ತು ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಬೋಧಿಸಬಾರದು ಎಂದು ಷರತ್ತು ವಿಧಿಸಿದೆ. ಈಗಾಗಲೇ ಪ್ರವೇಶ ಪಡೆದು ಮೊದಲ, ಎರಡನೇ ವರ್ಷದ ಕೃಷಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಕೋರ್ಸ್‍ನ ಅವಧಿ ಮುಗಿಸುವುದು ರೈ ವಿವಿಯ ಜವಾಬ್ದಾರಿ ಎಂದು ಸೂಚಿಸಲಾಗಿದೆ.
ಹೊಸದಾಗಿ ಕೃಷಿ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಕೋರ್ಸ್‍ಗಳಿಗೆ ಪ್ರವೇಶ ನೀಡಬಾರದು ಎಂಬ ಸೂಚನೆ ನೀಡಲಾಗಿದೆ.
ಸಚಿವ ಕೃಷ್ಣಬೈರೇಗೌಡ ಕಾಯ್ದೆಯ ಬಗ್ಗೆ ವಿವರಣೆ ನೀಡಿ ವಿವಿಗಳಲ್ಲಿ ಕೃಷಿ ವಿಷಯ ಬೋಧನೆಗೆ ಅಗತ್ಯ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ 2012ರಲ್ಲಿ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಸುರೇಶ್‍ಕುಮಾರ್, ಅರಗ ಜ್ಞಾನೇಂದ್ರ, ಎಂ.ಪಿ.ಕುಮಾರಸ್ವಾಮಿ, ಪಿ.ರಾಜೀವ್ ಮತ್ತಿತತರರು, ತಿದ್ದುಪಡಿ ಮಸೂದೆಯನ್ನು ಸ್ವಾಗತಿಸಿದರು.
ಬಿಜೆಪಿ ಶಾಸಕ ಮಾಧುಸ್ವಾಮಿ ಮಾತನಾಡಿ, ಖಾಸಗಿ ವಿವಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಪಠ್ಯಕ್ರಮ, ಪರೀಕ್ಷೆ, ಪ್ರವೇಶಾತಿ ಶುಲ್ಕ ಎಲ್ಲವನ್ನೂ ಖಾಸಗಿ ವಿವಿಗಳೆ ನಿರ್ವಹಿಸುತ್ತಿವೆ. ವಿವಿಗೆ ಒಳ್ಳೆಯ ಹೆಸರು ಬರಬೇಕು ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶೇ.80, 90ರಷ್ಟು ಅಂಕ ನೀಡುತ್ತಿವೆ. ಸರ್ಕಾರಿ ವಿವಿಗಳಲ್ಲಿ ಓದುವ ವಿದ್ಯಾರ್ಥಿಗಳು ಶೇ.60ರಷ್ಟು ಅಂಕ ಪಡೆಯುವುದು ದುಸ್ತರವಾಗುತ್ತಿದೆ. ಯಾವುದೇ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಖಾಸಗಿ ವಿವಿಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಅವಕಾಶ ಪಡೆಯುತ್ತಿದ್ದಾರೆ. ಸಕ್ರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಪಡೆಯಬೇಕು. ಕನಿಷ್ಠ ಪರೀಕ್ಷಾ ವ್ಯವಸ್ಥೆಯನ್ನಾದರೂ ತಾನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.