ಮೂವರು ದಂತ ಚೋರರ ಬಂಧನ

ಹುಬ್ಬಳ್ಳಿ : ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಆನೆದಂತ ಸಾಗಿಸುತ್ತಿದ್ದವರ ಮೂವರು‌ ದಂತಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ‌ ಮೂಲದ ಬಸ್ತ್ಯವ್ಂ ಸಿದ್ದ (38),ಜೈಲಾನಿ ಗರಗ(35), ಮಂಜುನಾಥ (43) ಬಂದಿತರು. 54 ಇಂಚು ಉದ್ದದ ದೊಡ್ಡ ಗಾತ್ರದ ದಂತ ಹಾಗೂ ಸಾಗಾಟ ಮಾಡಲು ಬಳಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ. ಈ ದಂತ ಒಂದು ಕೋಟಿ ಮೌಲ್ಯದ್ದು ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಅರಣ್ಯ ಪ್ರದೇಶದಲ್ಲಿ ಆನೆಯನ್ನು ಕೊಂದು ಅದರ ದಂತವನ್ನು ಸ್ವಿಪ್ಟ್ ಕಾರಿನಲ್ಲಿ‌ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ಗಬ್ಬೂರ್ ಬೈಪಾಸ್ ಬಳಿ ವಾಹನ ತಪಾಸಣೆ ಮಾಡಿದಾಗ ಆರೋಪಿಗಳು ಬಲೆಗೆ ಬಿದಿದ್ದಾರೆ. ಹಳಿಯಾಳದಿಂದ ಬೆಂಗಳೂರು ಕಡೆ ಹತ್ತು ಲಕ್ಷಕ್ಕೆ ದಂತ ಮಾರಾಟ ಮಾಡಲು ಹೊರಟಿದ್ದರು. ಮಾರುಕಟ್ಟೆಯಲ್ಲಿ ಈ ದಂತ ಒಂದು ಕೋಟಿ ಬೆಲೆ ಬಾಳುತ್ತದೆ. ಕರ್ನಾಟಕ ಸರ್ಕಾರ ಎಂದು ಬೋರ್ಡ್ ಹಾಕಿದ ಕಾರಿನಲ್ಲಿ ದಂತ ಸಾಗಾಟ ಮಾಡುತ್ತಿದ್ದರು. ಈ ಹಿಂದೆಯೂ ಇವರು ದಂತ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಯಚರಣೆ ಯಲ್ಲಿ ಬೆಂಡೀಗೇರಿ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ನಾಗರಾಜ್, ರಜಪೂತ್ , ಕಾಲವಾಡ್, ಸಂತೋಷ ಸೇರಿದಂತೆ ಕೆಲ ಸಿಬ್ಬಂದಿಗಳ ಸಹಾಯದಿಂದ ಆರೋಪಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ