ಟೋಕಿಯೊ, ಜು.12-ಉದಯರವಿ ನಾಡು ಜಪಾನಿನ ಹಲವೆಡೆ ವಿನಾಶಕಾರಿ ಮಳೆಯ ಆರ್ಭಟಕ್ಕೆ ಈವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ನಾಪತ್ತೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕಂಡು ಕೇಳರಿಯದ ದಾಖಲೆ ಮಳೆಯಿಂದಾಗಿ ಜಪಾನ್ ತಲ್ಲಣಗೊಂಡಿದೆ. ಭಾರೀ ವರ್ಷಧಾರೆ, ಪ್ರವಾಹ ಮತ್ತು ಭೂಕುಸಿತದಿಂದ ಸಾವು-ನೋವಿನೊಂದಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪ್ರವಾಹದಿಂದ ಸಂತ್ರಸ್ತರಾದ 10,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಅವರಿಗೆ ವಿವಿಧೆಡೆ ಆಶ್ರಯ ನೀಡಲಾಗಿದೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ. ಜಪಾನ್ ಭೀಕರ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಶಿಂಜೋ ಅಬೆ ವಿದೇಶಿ ಪ್ರವಾಸ ರದ್ದುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸಿದರು.