ಸಿಡ್ನಿ: ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಇನ್ನೂ 4 ತಿಂಗಳು ಬಾಕಿ ಇದ್ದು, ಈಗಾಗಲೇ ಈ ಪ್ರವಾಸದ ಕುರಿತು ಸಾಕಷ್ಟು ಕುತೂಹಲ ಕೆರಳಿದೆ.
ಇದಕ್ಕೆ ಇಂಬು ನೀಡುವಂತೆ ಆಸ್ಟ್ರೇಲಿಯಾ ದ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಮುಂಬರುವ ಬಹು ನಿರೀಕ್ಷಿತ ಟೂರ್ನಿಯ ಕುರಿತು ಅಲ್ಲಲ್ಲಿ ಮಾತನಾಡಿ ಟೂರ್ನಿಯ ರೋಚಕತೆ ಹೆಚ್ಚಿಸುತ್ತಿದ್ದಾರೆ. ನಿನ್ನೆಯಷ್ಟೇ ಆಸಿಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಕೊಹ್ಲಿ ಕುರಿತು ಮಾತನಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಗ್ಲೇನ್ ಮೆಗ್ರಾತ್ ಕೂಡ ಸೇರ್ಪಡೆಯಾಗಿದ್ದು, ಟೀಂ ಇಂಡಿಯಾ ತನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಖಾಸಗಿ ಕ್ರೀಡಾ ಮಾಧ್ಯಮದೊಂದಿಗೆ ಮಾತನಾಡಿರುವ ಮಾಜಿ ಆಸಿಸ್ ವೇಗಿ ಮೆಗ್ರಾತ್, ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಾಣಲಿದ್ದು, ಆಸಿಸ್ ಬಳಗ 4-0 ಅಂತರದಲ್ಲಿ ಭಾರತ ತಂಡವನ್ನು ವೈಟ್ ವಾಶ್ ಮಾಡಲಿದೆ ಎಂದು ಹೇಳಿದ್ದಾರೆ.
ಅಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಮಾತನಾಡಿರುವ ಮೆಗ್ರಾತ್, ಪ್ರಸ್ತುತ ಕೊಹ್ಲಿ ವಿಶ್ವಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸಮನ್ ನಿಜ. ಆದರೆ ಆಸಿಸ್ ನೆಲದಲ್ಲಿ ಅವರ ಆರ್ಭಟ ನಡೆಯುವುದಿಲ್ಲ. ಒತ್ತಡದ ಸಂದರ್ಭದಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ನಾನು ಕೂಡ ಕುತೂಹಲಕಾರಿಯಾಗಿದ್ದೇನೆ. ಭಾರತ ತಂಡಕ್ಕೆ ಬ್ಯಾಟಿಂಗೇ ಜೀವಾಳ. ಅದರ ಮೇಲೆ ನಾವು ನಮ್ಮ ಯೋಜನೆ ರೂಪಿಸಬೇಕು. ಒಂದು ವೇಳೆ ಅದರಲ್ಲಿ ನಾವು ಯಶಸ್ವಿಯಾಗಿದ್ದೇ ಆದರೆ ಖಂಡಿತಾ ಸರಣಿ ನಮ್ಮ ಕೈವಶವಾಗುತ್ತದೆ ಎಂದು ಮೆಗ್ರಾತ್ ಹೇಳಿದ್ದಾರೆ.
ಇನ್ನು ನವೆಂಬರ್ ತಿಂಗಳಿನಲ್ಲಿ ಭಾರತ ತಂಡ ಆಸ್ಚ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಟಿ20 ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ.
ಆಸಿಸ್ ನೆಲದಲ್ಲಿ ಭಾರತ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ.. 12ನೇ ಬಾರಿಗೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದು, ಈ ಪೈಕಿ ಒಟ್ಟು 44 ಟೆಸ್ಟ್ ಪಂದ್ಯಗಳನ್ನಾಡಿದೆ, ಆದರೆ 5 ಪಂದ್ಯಗಳಲ್ಲಿ ಮಾತ್ರ ಭಾರತ ತಂಡ ಜಯ ಸಾಧಿಸಿದೆ. ಇನ್ನು 1981, 1985 ಮತ್ತು 2003ರಲ್ಲಿ ಮಾತ್ರ ಭಾರತ ತಂಡ ಸರಣಿ ಸಮಬಲ ಸಾಧಿಸಿತ್ತು. ಉಳಿದೆಲ್ಲಾ ಸರಣಿಗಳನ್ನು ಕೈ ಚೆಲ್ಲಿತ್ತು.
ಇನ್ನು ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮತ್ತು ಆ ತಂಡದ ಸ್ಚಾರ್ ಬ್ಯಾಟ್ಸಮನ್ ಸ್ಟೀವೆನ್ ಸ್ಮಿತ್ ಮತ್ತು ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ನಿಷೇಧಕ್ಕೆ ಒಳಗಾಗಿ ತಂಡದಿಂದ ದೂರ ಉಳಿದಿದ್ದಾರೆ. ಹೀಗಾಗಿ ಆಸಿಸ್ ನೆಲದಲ್ಲಿ 4-0 ಅಂತರದಲ್ಲಿ ಸರಣಿ ಗೆಲಲ್ಲು ಟೀಂ ಇಂಡಿಯಾಗೆ ಸುವರ್ಣಾವಕಾಶವಿದೆ. ಇದೇ ಕಾರಣಕ್ಕೆ ಮುಂಬರುವ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಕದನ ಕುತೂಹಲ ಕೆರಳಿಸಿದೆ.
ಆದರೆ ಈ ಬಾರಿಯ ಪ್ರವಾಸ ಟೀಂ ಇಂಡಿಯಾ ಮಹತ್ವದ ಪ್ರವಾಸವಾಗಿದ್ದು, ಪ್ರಸ್ತುತ ಭಾರತ ತಂಡ ಅದ್ಬುತ ಫಾರ್ಮ್ ನಲ್ಲಿದೆ. ಇದೇ ಪ್ರದರ್ಶನವನ್ನು ಆಸ್ಟ್ರೇಲಿಯಾದಲ್ಲೂ ಮುಂದುವರೆಸಿದರೆ ಐತಿಹಾಸಿಕ ಸರಣಿ ಜಯದ ಮೂಲಕ ಭಾರತ ತಂಡ ದಾಖಲೆ ನಿರ್ಮಾಣ ಮಾಡಲಿದೆ.