ಬೆಂಗಳೂರು, ಜು.10-ನಗರದಲ್ಲಿ ಕೇಬಲ್ ಮಾಫಿಯಾವನ್ನು ಮಟ್ಟ ಹಾಕಲಾಗುವುದು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ನಲ್ಲಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ರಾಜಧಾನಿ ಬೆಂಗಳೂರಿನಲ್ಲಿ ಕೇಬಲ್ ಹಾವಳಿ ತೀವ್ರವಾಗಿದ್ದು, ಅನಧಿಕೃತ ಕೇಬಲ್ ಹಾಕುವವರಿಗೆ 25 ಲಕ್ಷ ದಂಡ, ರಸ್ತೆ ಅಗೆದು ಹಾಳು ಮಾಡುವವರಿಗೆ 10 ಲಕ್ಷ ದಂಡ ಹಾಗೂ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ 11 ಟೆಲಿಕಾಂ ಸಂಸ್ಥೆಗಳು, 2 ನಾನ್ ಟೆಲಿಕಾಂ ಸಂಸ್ಥೆಗಳಿಗೆ ಕೇಬಲ್ ಹಾಕಲು ಅನುಮತಿ ನೀಡಲಾಗಿದೆ. ಅದನ್ನು ಹೊರತುಪಡಿಸಿ ಎಲ್ಲೆಂದರಲ್ಲಿ ಕೇಬಲ್ ಹಾಕಲಾಗುತ್ತಿದೆ. ಟಿವಿ ಕೇಬಲ್ ಹಾಕುವವರ ಹಾವಳಿ ಹೆಚ್ಚಾಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.
8860 ಕಿ.ಮೀ. ಕೇಬಲ್ ಅಳವಡಿಸಲು ಬಿಬಿಎಂಪಿ ಅನುಮತಿ ನೀಡಿದ್ದು, 628 ಕೋಟಿ ಶುಲ್ಕ ಸಂಗ್ರಹ ಮಾಡಿದೆ. ಈಗಾಗಲೇ ಕೇಬಲ್ ಅಳವಡಿಕೆಯಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ಅನಧಿಕೃತ ಕೇಬಲ್ ಅಳವಡಿಕೆಯಿಂದ ಮತ್ತಷ್ಟು ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ಇದನ್ನು ತಪ್ಪಿಸಲು ಅತಿ ಹೆಚ್ಚು ದಂಡ ವಿಧಿಸಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟೆಂಡರ್ಶ್ಯೂರ್ ರಸ್ತೆ ಮಾಡುತ್ತಿರುವುದರಿಂದ ಅನಧಿಕೃತ ಕೇಬಲ್ನಿಂದ ಆಗುವ ತೊಂದರೆ ತಪ್ಪುತ್ತದೆ. ಈಗಾಗಲೇ ಹಲವೆಡೆ ಟೆಂಡರ್ ಶ್ಯೂರ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಎಲ್ಲಾ ರಸ್ತೆಗಳಿಗೂ ಟೆಂಡರ್ ಶ್ಯೂರ್ ವಿಸ್ತರಿಸಲು ಕ್ರಮಕೈಗೊಳ್ಳುವ ಚಿಂತನೆ ಇದೆ. ಕೇಬಲ್ ಹಾನಿಯಿಂದ ತೊಂದರೆಯಾಗಿರುವವರಿಗೆ ಪರಿಹಾರ ಕೊಡುವ ಭರವಸೆಯನ್ನು ಸಚಿವರು ನೀಡಿದರು.