ಮಂಡ್ಯ ಡೈರಿಯಲ್ಲಿ ಭಾರೀ ಭ್ರಷ್ಟಚಾರ

 

ಬೆಂಗಳೂರು, ಜು.10- ಮಂಡ್ಯ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರ, ಅಕ್ರಮ ನೇಮಕಾತಿ, ರೈತರ ಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ಹಣ ದುರುಪಯೋಗ ವಿಷಯ ವಿಧಾನಪರಿಷತ್‍ನಲ್ಲಿ ಪ್ರತಿಧ್ವನಿಸಿತು.
ನಿಯಮ 72ರ ಅಡಿ ಎನ್.ಅಪ್ಪಾಜಿಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ಉತ್ತರ ನೀಡಿದರೂ ತೃಪ್ತರಾಗದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮಂಡ್ಯ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಭಾರೀ ನಷ್ಟವಾಗಿದೆ. ಸ್ವಜನ ಪಕ್ಷಪಾತ ಮತ್ತು ಭಾರೀ ಅವ್ಯವಹಾರ ನಡೆದಿದೆ. ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿದರು.
ರೈತರ ಕಲ್ಯಾಣ ಟ್ರಸ್ಟ್ ರಚಿಸಿ ಹಣ ದುರುಪಯೋಗ ಮಾಡಲಾಗಿದೆ. ಒಕ್ಕೂಟದ ಮಾರುಕಟ್ಟೆ ವಿಭಾಗದಲ್ಲಿ ಭ್ರಷ್ಟಾಚಾರ, ಟೆಂಡರ್ ಪ್ರಕ್ರಿಯೆ ವಿಭಾಗದಲ್ಲಿ ಕಾನೂನು ಉಲ್ಲಂಘನೆಯಾಗಿದೆ, ಹಾಲಿನ ದರದಲ್ಲಿ ಮೋಸ ಮಾಡಲಾಗಿದೆ ಎಂದು ಹೇಳಿದರು.
ಇದಕ್ಕೆ ಉಗ್ರಪ್ಪ ದನಿಗೂಡಿಸಿ ಇಷ್ಟೆಲ್ಲ ಅವ್ಯವಹಾರ, ಅಕ್ರಮ ನಡೆದಿದೆ. ಸದನ ಸಮಿತಿ ರಚಿಸಿ ತನಿಖೆ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.
ಇದಕ್ಕೆ ಸಮಜಾಯಿಷಿ ನೀಡಿದ ಸಚಿವರು ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ