ಬೆಂಗಳೂರು, ಜು.10- ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಹಿದ್ದೀನ್ (80) ಇಂದು ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ತೊಂದರೆ ಸೇರಿದಂತೆ ವಯೋ ಸಹಜ ಕಾಯಿಲೆಯಿಂದ ಮೊಹಿದ್ದೀನ್ ಬಳಲುತ್ತಿದ್ದರು. ಮೂಲತಃ ಮಂಗಳೂರು ನಿವಾಸಿದ ಅವರು, ಕೆಲವು ದಿನಗಳಿಂದ ಅನಾರೋಗ್ಯ ಕಾರಣ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ವಲ್ಪ ಚೇತರಿಕೆ ಕಂಡು ಬಂದ ನಂತರ ಬೆಂಗಳೂರಿಗೆ ಬಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.
ಮೃತರ ಅಂತಿಮ ದರ್ಶನಕ್ಕೆ ಸಂಜಯ್ ನಗರದಲ್ಲಿರುವ ಅವರ ನಿವಾಸದಲ್ಲಿ 11 ಗಂಟೆವರೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಬಳಿಕ ಅವರ ಹುಟ್ಟೂರು ಮಂಗಳೂರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ ಮೊಹಿದ್ದೀನ್, 1978ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಶಾಸಕರಾಗಿದ್ದರು. ನಂತರ ಜನತಾ ಪರಿವಾರ ಸೇರಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. ನಂತರ ಮತ್ತೆ ಕಾಂಗ್ರೆಸ್ ಸೇರಿ ಎಐಸಿಸಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ಮಂಗಳೂರಿನ ಬಜ್ಪೆಯವರಾದ ಬಿ.ಎ.ಮೊಹಿದ್ದೀನ್, ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ ಸಹ ನಂತರ ಜನತಾ ಪರಿವಾರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ದೇವರಾಜ ಅರಸು ಅವರ ನಿಕಟವರ್ತಿಯಾಗಿದ್ದ ಅವರು, ವಿಧಾನ ಪರಿಷತ್‍ನಲ್ಲಿ ಸುಮಾರು ಹತ್ತು ವರ್ಷ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಸಿಎಂ ಸಂತಾಪ:
ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಹಿರಿಯ ರಾಜಕಾರಣಿ ಬಿ.ಎ.ಮೊಹಿದ್ದೀನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಮೊಹಿದ್ದೀನ್ ಅವರು ನಂತರದ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. 2016ರಲ್ಲಿ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ನಿಧನದಿಂದ ನಾಡು ಹಿರಿಯ ಮುತ್ಸದ್ಧಿಯೊಬ್ಬರನ್ನು ಕಳೆದು ಕೊಂಡಂತಾಗಿದೆ ಎಂದು ಸಿಎಂ ಕುಮಾರಸ್ವಾಮಿ ಸ್ಮರಿಸಿದ್ದಾರೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ಸಿಎಂ ಪ್ರಾರ್ಥಿಸಿದ್ದಾರೆ.
ರಾಜ್ಯ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ ಮೊಹಿದ್ದೀನ್ ಅವರ ನಿಧನದಿಂದ ವೈಯಕ್ತಿಕವಾಗಿ ಬಹಳ ನೋವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶೋಕ ವ್ಯಕ್ತಪಡಿಸಿದ್ದಾರೆ.
ಮೊಹಿದ್ದೀನ್ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಯು.ಟಿ.ಖಾದರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.