ಜೋಹಾನ್ಸ್ ಬರ್ಗ್: ಮಹಿಳಾ ಕ್ರಿಕೆಟ್ ನಲ್ಲಿ ಸಲಿಂಗ ವಿವಾಹಗಳು ಇದೀಗ ಸಾಮಾನ್ಯವಾಗಿ ಬಿಟ್ಟಿವೆ. ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವಾನ್ ನೈಕರ್ಕ್ ಸಹ ಆಟಗಾರ್ತಿ ಹಾಗೂ ಆಲ್ ರೌಂಡರ್ ಮಾರಿಜಾನ್ನೆ ಕಾಪ್ ರನ್ನು ವಿವಾಹವಾಗಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಸಲಿಂಗ ವಿವಾಹವಾದ ಎರಡನೇ ಜೋಡಿ ಎನಿಸಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡದ ಆ್ಯಮಿ ಸತ್ತರ್ ವೈಟ್ ಹಾಗೂ ಲೀ ತಾಹುಹು ಮದುವೆಯಾಗಿದ್ದರು, ವಿವಾಹದ ಚಿತ್ರಗಳನ್ನು ಮಾರಿಜಾನ್ನೆ ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ್ದಾರೆ.
ವಿಶ್ವದಲ್ಲಿ ದಕ್ಷಿಣ ಆಫ್ರಿಕಾ ಸಲಿಂಗ ವಿವಾಹವನ್ನು ಕಾನೂನುಬದ್ಧ ಮಾಡಿದ 5ನೇ ದೇಶವಾಗಿದೆ. 2006ರಲ್ಲಿ ಸಲಿಂಗ ವಿವಾಹವನ್ನು ಆಫ್ರಿಕಾ ಮಾನ್ಯ ಮಾಡಿತ್ತು. ಇನ್ನು 2009ರಲ್ಲಿ ಕ್ರಿಕೆಟ್ ವೃತ್ತಿ ಬದುಕಿಗೆ ಈ ಜೋಡಿ ಪಾದಾರ್ಪಣೆ ಮಾಡಿತ್ತು. ನೈಕರ್ಕ್ 125 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾ ಪರ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿದ್ದಾರೆ. ಮಾರಿಜಾನ್ನೆ 99 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ನಲ್ಲಿ ನೈಕರ್ಕ್ 1,770 ರನ್ ಹಾಗೂ ಮಾರಿಜಾನ್ನೆ 1,610 ರನ್ ಸಿಡಿಸಿದ್ದಾರೆ.