ಸಂವೃದ್ಧಿ ವರ್ಷಧಾರೆಯಿಂಧ ಭರ್ತಿಯಾಗುತ್ತಿರುವ ಜಲಾಶಯಗಳು

 

ಬೆಂಗಳೂರು, ಜು.9- ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳು ಅವಧಿಗೂ ಮುನ್ನವೇ ಭರ್ತಿಯಾಗುವ ಸಂಭವವಿದೆ.
ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪ್ರಮುಖ ಜಲಾಶಯವಾದ ಕೆಆರ್‍ಎಸ್, ಮಧ್ಯ ಕರ್ನಾಟಕದ ಭದ್ರ, ತುಂಗಭದ್ರ, ಕೃಷ್ಣ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.
ಉತ್ತರ ಕನ್ನಡ ಜಿಲ್ಲೆಯ ಘಟಪ್ರಭ ಹಾಗೂ ಬೆಳಗಾವಿಯ ಮಲಪ್ರಭ ಜಲಾಶಯಗಳನ್ನು ಹೊರತುಪಡಿಸಿದರೆ ಬಹುತೇಕ ನಾಡಿನ ಪ್ರಮುಖ ಜಲಾಶಯಗಳಲ್ಲಿ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗಿರುವುದು ಜನತೆಯಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಒಂದೂವರೆ ದಶಕಗಳಿಗೆ ಹೋಲಿಸಿದರೆ ಈ ಬಾರಿ ಜಲಾಶಯಗಳು ಎರಡು ತಿಂಗಳು ಮುನ್ನವೇ ಹೆಚ್ಚಿನ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ದುಪ್ಪಟ್ಟಾಗಿದೆ.
ಕಾವೇರಿಕೊಳ್ಳದ ಪ್ರಮುಖ ಜಲಾಶಯಗಳಾದ ಕೆಆರ್‍ಎಸ್, ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಇದರಿಂದ ಕಾವೇರಿ ತೀರ ಪ್ರದೇಶಗಳಾದ ಮೈಸೂರು, ಮಂಡ್ಯ, ಹಾಸನ, ರಾಮನಗರ ಹಾಗೂ ಬೆಂಗಳೂರಿಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬುದು ಅಧಿಕಾರಿಗಳ ವಿಶ್ವಾಸ.
ಇನ್ನು ಕೃಷಿ ಚಟುವಟಿಕೆಗಳು ಕೂಡ ಗರಿಗೆದರಿದ್ದು , ಕಾವೇರಿ ಕೊಳ್ಳದಲ್ಲಿ ಈ ಬಾರಿ ಎರಡು ಬೆಳೆಗಳನ್ನು ಬೆಳೆಯಬಹುದೆಂಬ ನಂಬಿಕೆಯನ್ನು ರೈತರು ಇಟ್ಟುಕೊಂಡಿದ್ದಾರೆ.
ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಜಲಾಶಯಗಳಿಗೆ ನೀರಿನ ಸಂಗ್ರಹ ಏರಿಕೆಯಾಗುತ್ತಿದೆ. 2017ಕ್ಕೆ ಹೋಲಿಸಿದರೆ ಸುಮಾರು 10ರಿಂದ 15 ಅಡಿಗಳಷ್ಟು ಹೆಚ್ಚಿನ ನೀರು ಸಂಗ್ರಹವಾಗಿದೆ. ಕೆಆರ್‍ಎಸ್‍ನಲ್ಲಿ ನಿನ್ನೆಗೆ 110 ಅಡಿ ನೀರು ಸಂಗ್ರಹವಾಗಿದ್ದರೆ, ಭರ್ತಿಯಾಗಲು ಇನ್ನು 15 ಅಡಿ ನೀರು ಬಾಕಿ ಇದೆ.
ಇದೇ ರೀತಿ ಕಬಿನಿ ಜಲಾಶಯದಲ್ಲಿ 2282 ಅಡಿ ನೀರು ಸಂಗ್ರಹವಾಗಿದ್ದರೆ ಭರ್ತಿಗೆ ಎರಡು ಮಾತ್ರ ಬಾಕಿ ಉಳಿದಿದೆ. ಹಾರಂಗಿಯಲ್ಲಿ 2852 ಅಡಿ ನೀರು ಸಂಗ್ರವಾಗಿದ್ದು , ಭರ್ತಿಗೆ 7 ಅಡಿ ಬಾಕಿಯಿದೆ.
ಲಿಂಗನಮಕ್ಕಿಯಲ್ಲೂ ನೀರಿನ ಪ್ರಮಾಣ ಹೆಚ್ಚಳ:
ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯದಲ್ಲೂ ಈ ಬಾರಿ ಯಥೇಚ್ಛವಾಗಿ ನೀರು ಸಂಗ್ರಹವಾಗಿದೆ. ಕಳೆದ ಒಂದು ದಶಕದಿಂದ ಭರ್ತಿಯಾಗಿರುವ ನಿದರ್ಶನವೇ ಇಲ್ಲ.
ಈ ಬಾರಿ ಅವಧಿಗೂ ಮುನ್ನವೇ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿರುವುದು ವಿದ್ಯುತ್ ಉತ್ಪಾದನೆಗೆ ಎದುರಾಗಿದ್ದ ಕಾರ್ಮೋಡ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. ಸುಮಾರು ಅರ್ಧ ರಾಜ್ಯಕ್ಕೆ ಇಲ್ಲಿಂದಲೇ ವಿದ್ಯುತ್ ಪೂರೈಕೆಯಾಗುತ್ತದೆ.
ಸದ್ಯಕ್ಕೆ ಲಿಂಗನಮಕ್ಕಿ ಜಲಾಶಯದಲ್ಲಿ 1775 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಾಮಥ್ರ್ಯ 1819 ಅಡಿ. ಮಧ್ಯಕರ್ನಾಟಕದ ಜೀವನಾಡಿಯಾದ ಭದ್ರ ಜಲಾಶಯದಲ್ಲೂ ಈ ಬಾರಿ ನೀರಿನ ಸಂಗ್ರಹ ಹೆಚ್ಚಳವಾಗಿರುವುದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಭಾಗದ ಜನರಲ್ಲಿ ಹರ್ಷವುಂಟು ಮಾಡಿದೆ.
ಕಳೆದ ಐದು ವರ್ಷಗಳಿಂದ ಸತತ ಬರಗಾಲ ಹಾಗೂ ಜಲಾಶಯದಲ್ಲಿ ನೀರು ಇಲ್ಲದ ಪರಿಣಾಮ ಕೇವಲ ಒಂದು ಬೆಳೆ ಬೆಳೆಯಲು ಮಾತ್ರ ಸಾಧ್ಯವಾಗಿತ್ತು. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಕರಾವಳಿ ಹಾಗೂ ಮಲೆನಾಡಿನಲ್ಲಿ ಭರ್ಜರಿ ವರ್ಷಧಾರೆ ಆದ ಪರಿಣಾಮ ಭದ್ರ ಜಲಾಶಯಕ್ಕೆ ನಿರೀಕ್ಷೆಗೂ ಮೀರಿದ ನೀರು ಹರಿದು ಬಂದಿದೆ.
ತುಂಗಭದ್ರ ನದಿಯೂ ಭರ್ತಿಯಾಗಲು ಇನ್ನು 20 ಅಡಿ ಬಾಕಿ ಇದ್ದರೆ ಆಲಮಟ್ಟಿ , ನಾರಾಯಣಪುರ ಸೇರಿದಂತೆ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.
ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮುಂಗಾರು ಮುಗಿದು ನಂತರ ಹಿಂಗಾರಿನಲ್ಲಿ ಒಂದಿಷ್ಟು ಮಳೆ ಬಂದರೂ ಜಲಾಶಯಗಳು ಬಹುತೇಕ ಭರ್ತಿಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ