ಬೆಂಗಳೂರು, ಜು.9- ಚುನಾವಣಾ ಪೂರ್ವದಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್‍ನ್ನು ಬಿಜೆಪಿಯ ಬಿ-ಟೀಂ ಎಂದು ಕರೆಯದೇ ಇದ್ದರೆ ಜೆಡಿಎಸ್ 70 ಸ್ಥಾನ ಗಳಿಸುತ್ತಿತ್ತು. ಬಿಜೆಪಿ 70 ಸ್ಥಾನ ದಾಟುತ್ತಿರಲಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿದ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರದ ರಚನೆ ಅವಧಿಯಲ್ಲಿ ಕುಮಾರಸ್ವಾಮಿ ಮಾತು ತಪ್ಪುವುದಿಲ್ಲ ಎಂದು ದೇವೇಗೌಡರ ಬಳಿ ಹೇಳಿ ಬಿಜೆಪಿ ಜೊತೆ ಸರ್ಕಾರ ರಚಿಸಿದರು. ಅದು ಬೇರೆ ವಿಷಯ.
ಚುನಾವಣೆಗೆ ಮುನ್ನ ಹಾಸನದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ಬಿ-ಟೀಂ ಎಂದು ಇದ್ದಂತೆ ಹೇಳಿದ್ದರು. ಅದರ ಪರಿಣಾಮ ನಮಗೆ 30 ಸ್ಥಾನಗಳು ಕಡಿಮೆಯಾದವು. ಬಿಜೆಪಿ 110 ಸ್ಥಾನ ಗಳಿಸಲು ಆ ಹೇಳಿಕೆಯೇ ಕಾರಣ. ಬಿಜೆಪಿ ಗೆದ್ದಿರುವ 30 ಕ್ಷೇತ್ರಗಳಲ್ಲಿ ಜೆಡಿಎಸ್ 30 ಸ್ಥಾನ ಗೆಲ್ಲಬೇಕಿತ್ತು. ರಾಹುಲ್ ಹೇಳಿಕೆಯಿಂದ ನಾವು ಸೋಲು ಕಂಡೆವು. ಇಲ್ಲವಾಗಿದ್ದರೆ ಜೆಡಿಎಸ್ 70 ಸ್ಥಾನಗಳನ್ನು ಗೆಲ್ಲುತ್ತಿತ್ತು. ಬಿಜೆಪಿ 70 ಸ್ಥಾನಕ್ಕೆ ನಿಲ್ಲುತ್ತಿತ್ತು ಎಂದು ಹೇಳಿದರು.
ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಅವರು ರಾಹುಲ್ ಗಾಂಧಿ ಅವರ ಹೇಳಿಕೆ ಸತ್ಯವೋ ಸುಳ್ಳೋ ಎಂಬುದನ್ನು ಸ್ಪಷ್ಟಪಡಿಸಿ ಎಂದರು.
ಬಿಜೆಪಿಯ ಮತ್ತೋರ್ವ ಸದಸ್ಯ ಅರವಿಂದ ಲಿಂಬಾವಳಿ, ರೇವಣ್ಣ ಮಾತು ಆರಂಭಿಸುವ ಮುನ್ನವೇಸತ್ಯ ಹೇಳುತ್ತೇನೆ ಎಂದಿದ್ದಾರೆ. ಹಾಗಾಗಿ ಅವರು ಹೇಳಿರುವುದೆಲ್ಲ ಸತ್ಯ ಎಂದು ಕಿಚಾಯಿಸಿದರು.
ರಾಹುಲ್ ಗಾಂಧಿ ಆ ರೀತಿ ಹೇಳಿಕೆ ನೀಡಿದ್ದರಿಂದ ಜೆಡಿಎಸ್ 38 ಸ್ಥಾನ ಗೆದ್ದಿದೆ. ಇಲ್ಲದಿದ್ದರೆ ಇನ್ನೂ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲುತ್ತಿತ್ತು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಮಧ್ಯಪ್ರವೇಶಿಸಿದ ರಮೇಶ್‍ಕುಮಾರ್ ಅವರು , ರಾಹುಲ್ ಹೇಳಿಕೆಯಿಂದ ಜೆಡಿಎಸ್ -ಬಿಜೆಪಿ ಇಬ್ಬರಿಗೂ ಲಾಭವಾಗಿದೆ. ನೀವು ಅವರಿಗೆ ಥ್ಯಾಂಕ್ಸ್ ಹೇಳಿ, ನಾವು ರಾಹುಲ್ ಗಾಂಧಿ ಅವರಿಗೆ ಥ್ಯಾಂಕ್ಸ್ ಹೇಳುತ್ತೇವೆ ಎಂದು ಚರ್ಚೆಗೆ ತೆರೆ ಎಳೆದರು.
ನಂತರ ಮಾತನಾಡಲು ಎದ್ದು ನಿಂತ ಯಡಿಯೂರಪ್ಪನವರಿಗೆ ರಮೇಶ್‍ಕುಮಾರ್ ಅವರು, ರೇವಣ್ಣ ಅವರಿಗೆ ನಿಮ್ಮ ಮೇಲೆ ಅಪಾರ ಕಾಳಜಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನೀವು ಈ ಮೊದಲಿನ ಉದ್ವೇಗವನ್ನು ಮರೆತು ನಗಲು ಆರಂಭೀಸಿದ್ದೀರಿ. ನಗುತ್ತಾ ಇರಿ. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿ ಯಡಿಯೂರಪ್ಪ ಅವರಿಗೆ ರಮೇಶ್‍ಕುಮಾರ್ ಸಲಹೆ ನೀಡಿದರು.