ಸಮ್ಮಿಶ್ರ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು – ಡಿ.ವಿ.ಸದಾನಂದಗೌಡ

ಮಂಗಳೂರು, ಜು.8- ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು ಎಂದು ಕೇಂದ್ರ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖ್ಯಿಕ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರ್ಚಿ ಉಳಿಸಿಕೊಳ್ಳಲು ಆಡಳಿತರೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ಹಿಡಿತ ಇಲ್ಲದಂತಾಗಿದೆ. ಅಧಿಕಾರಿಗಳು ಕೂಡ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿ ಜನರು ಸಂಕಷ್ಟಕ್ಕೀಡಾಗಿದ್ದರು. ರಾಜ್ಯ ಸರ್ಕಾರ ಸಭೆ ಕೂಡ ನಡೆಸಿಲ್ಲ. ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಜನರು ಮಳೆಯ ನೀರಿನಲ್ಲಿ ಮುಳುಗುತ್ತಿದ್ದರೂ ಕೇಳುವವರು ಇಲ್ಲದಂತಾಗಿದೆ. ಜನರನ್ನು ನಿರ್ಲಕ್ಷಿಸಿದ ಸರ್ಕಾರ ನಾಳೆ ಮುಳುಗಿ ಹೋಗುತ್ತದೆ ಎಂದು ಟೀಕಾ ಪ್ರಹಾರ ಮಾಡಿದರು.
ಹರಿದ ಬಟ್ಟೆಯಂತಾಗಿದೆ: ದೇಶದಲ್ಲಿ ತೃತೀಯ ರಂಗ ಹರಿದ ಬಟ್ಟೆಯಂತಾಗಿದೆ. ತೃತೀಯ ರಂಗದ ಸಂಘಟನೆಯಲ್ಲಿರುವವರ ನಡುವೆ ಒಮ್ಮತವಿಲ್ಲ. ಒಬ್ಬರನ್ನು ನೋಡಿದರೆ ಮತ್ತೊಬ್ಬರಿಗೆ ಆಗುವುದಿಲ್ಲ. ಹೀಗಾಗಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಮಾಯಾವತಿ ಈಗಾಗಲೇ ಕಾಂಗ್ರೆಸ್ ಜತೆ ಹೋಗುವುದಿಲ್ಲ ಎಂದಿದ್ದಾರೆ. ತೃತೀಯ ರಂಗದ ನಾಯಕರ ನಡುವೆ ಸಹಮತವಿಲ್ಲ. ಭಿನ್ನಾಭಿಪ್ರಾಯವೇ ಹೆಚ್ಚಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ತೃತೀಯ ರಂಗ ಅಷ್ಟೇ ಅಲ್ಲ. ಯಾರಿಂದಲೂ ಸಾಧ್ಯವಿಲ್ಲ ಎಂದು ಸದಾನಂದಗೌಡರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ