ಕ್ಷೇತ್ರದ ಸಮಸ್ಯೆಗಳ ಆಲಿಸಿದ ಸಚಿವ ಸಾ.ರಾ.ಮಹೇಶ್

ಮೈಸೂರು, ಜು.7-ತಮ್ಮ ಸ್ವಕ್ಷೇತ್ರವಾದ ಕೆ.ಆರ್.ನಗರದ ಹರದನಹಳ್ಳಿಯಲ್ಲಿ ರೇಷ್ಮೆ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯ ಹೂಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮದ ಅನಂತ್ ಎಂಬುವರ ಮನೆಯಲ್ಲಿ ತಂಗಿದ್ದ ಸಚಿವರು ಇಂದು ಬೆಳಗ್ಗೆ ಅವರ ಮನೆಯಲ್ಲೇ ಇಡ್ಲಿ, ಸಾಂಬಾರ್ ಮತ್ತು ಚಪಾತಿಯನ್ನು ಉಪಹಾರವಾಗಿ ಸೇವಿಸಿದರು. ಇದೇ ಸಂದರ್ಭದಲ್ಲಿ ಹರದನಹಳ್ಳಿಯ ಸಮಸ್ಯೆಗಳನ್ನು ಜನ ಹೇಳಿಕೊಂಡು ನಿವಾರಣೆ ಮನವಿ ಮಾಡಿದರು. ಬೆಳಗ್ಗಿನಿಂದ ಬಿಟ್ಟು ಬಿಡದಂತೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿ ಕಚೇರಿಗೆ ವರ್ಗಾಯಿಸಿದರು. ಅಲ್ಲೇ ಜನರಿಂದ ಅಹವಾಲು ಸ್ವೀಕರಿಸಿದರು. ರಾತ್ರಿ 10.15ಕ್ಕೆ ಹರದನಹಳ್ಳಿಯ ಗ್ರಾಪಂಗೆ ಭೇಟಿ ನೀಡಿದ ಅವರು ಕಚೇರಿಯಲ್ಲಿ ಕುಳಿತು ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾ ಮಟ್ಟದ ಯಾವ ಅಧಿಕಾರಿಗಳು ಬಂದಿದ್ದಾರೆ ಎಂಬುದನ್ನು ಪರಿಶೀಲಿಸಿದರು.
ಅಲ್ಲಿಂದ ಮೈಸೂರು ಜಿಪಂ ಮಾಜಿ ಸದಸ್ಯ ವಿಜಯ್ ಅವರ ಮನೆಯಲ್ಲಿ ಊಟ ಮುಗಿಸಿ ಅನಂತ್ ಎಂಬುವರ ಮನೆಗೆ ತೆರಳಿದರು. ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದರು. ಗ್ರಾಮದ ಸರ್ಕಾರಿ ಶಾಲೆಯಲ್ಲೇ ಸಾ.ರಾ.ಮಹೇಶ್ ಒಂದರಿಂದ ಆರನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದ ಕಾರಣಕ್ಕೆ ಗ್ರಾಮ ವಾಸ್ತವ್ಯಕ್ಕೆ ಈ ಗ್ರಾಮವನ್ನೇ ಆಯ್ಕೆ ಮಾಡಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ