ಮಾಸ್ಕೋ, ಜು.6-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಠ ಫ್ರಾನ್ಸ್ ತಂಡ ಗೆಲುವಿನ ನಾಗಾಲೋಟ ಮುಂದುವರಿಸಿರುವ ಹಿಂದಿನ ರಹಸ್ಯವೇನು…? ಇದನ್ನು ಕಂಡುಕೊಂಡಿರುವ ರಷ್ಯಾದ ಗಿಣ್ಣು ತಯಾರಕರೊಬ್ಬರು ಅದೇ ಆಹಾರ ಸೂತ್ರದೊಂದಿಗೆ ಮನೆ ರುಚಿಯ ಚೀಸ್ ತಯಾರಿಸಿ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ತಂಡ ಯಶಸ್ವಿಯಾಗಿ ಮುನ್ನಡೆಯುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ರಷ್ಯಾದ ಚೀಸ್ ಮೇಕರ್ ಓಲೆಗ್ ಸಿರೋಟಾ ಕಂಡುಕೊಂಡಿದ್ದಾರೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಚೀಸ್ ಮತ್ತು ಹಾಲಿನ ಉತ್ಪನ್ನಗಳನ್ನು ಫ್ರೆಂಚ್ ಆಟಗಾರರು ಯಥೇಚ್ಚವಾಗಿ ಸೇವಿಸುವುದೇ ಅವರ ಸಾಮಥ್ರ್ಯದ ರಹಸ್ಯ.
ಯುರೋಪ್ನ ತಾಜಾ ಆಹಾರೋತ್ಪನ್ನಗಳಿಗೆ ರಷ್ಯಾ ದಿಗ್ಬಂಧನ ವಿಧಿಸಿದ ನಂತರ 2015ರಲ್ಲಿ ರಸ್ಕಿ ಪರಮೆಝನ್ ಎಂಬ ಪುಟ್ಟ ಚೀಸ್ ತಯಾರಿಕೆ ಘಟಕವನ್ನು ಆರಂಭಿಸಿದ ಸಿರೋಟಾ ವಿಶ್ವಕಪ್ ಫುಟ್ಬಾಲ್ ವೇಳೆ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಇವರು ಪ್ರತಿದಿನ 400 ಕಿಲೋಗ್ರಾಂಗಳಷ್ಟು ಚೀಸ್ ಹಾಗೂ ಯೋಗರ್ಟ್ಗಳಿರುವ ಡಜನ್ಗಟ್ಟಲೆ ಜಾಡಿಗಳನ್ನು ಫ್ರೆಂಚ್ ಆಟಗಾರರು ವಾಸ್ತವ್ಯ ಹೂಡಿರುವ ಹೋಟೆಲ್ಗೆ ಪೂರೈಸುತ್ತಿದ್ದಾರೆ.
ಫ್ರೆಂಚ್ ತಂಡದ ಗೆಲುವಿನ ರಹಸ್ಯ ನನಗೆ ಮನವರಿಕೆಯಾಗಿದೆ. ಅವರು ಉತ್ತಮ ಚೀಸ್ನನ್ನು ಪ್ರತಿದಿನ ಬಳಸುತ್ತಾರೆ. ಇದರಿಂದ ಅವರಲ್ಲಿ ಶಕ್ತಿ ಸಂಚಯವಾಗುತ್ತದೆ. ಚೀಸ್ಗಳನ್ನು ಸೇವಿಸಿ ಅವರು ಪಂದ್ಯಗಳನ್ನು ಗೆಲ್ಲುತ್ತಿದ್ದಾರೆ. ಜರ್ಮನಿ, ಬ್ರೆಜಿಲ್ ಮತ್ತು ಇಂಗ್ಲೆಂಡ್ ತಂಡಗಳು ನಮ್ಮ ಚೀಸ್ ಖರೀದಿಸುವುದಿಲ್ಲ. ಇದೇ ಕಾರಣಕ್ಕಾಗಿ ಈ ತಂಡಗಳಿಗೆ ಮಿಶ್ರ ಫಲಿತಾಂಶ ಲಭಿಸುತ್ತಿದೆ ಎನ್ನುತ್ತಾರೆ ಸಿರೋಟಾ.
ಫ್ರೆಂಚ್ ರಾಷ್ಟ್ರೀಯ ತಂಡಕ್ಕೆ ಪಂದ್ಯಾವಳಿ ವೇಳೆ ಸಾಕಷ್ಟು ಪ್ರಮಾಣದಲ್ಲಿ ಚೀಸ್ ಬೇಕು. ಅವರ ತಂಡದ ಯಶಸ್ಸಿನ ಗುಟ್ಟು ಇದು. ಅವರು ಪ್ರತಿದಿನ ಚೀಸ್ ಸೇವಿಸುತ್ತಾರೆ. ಇವರ ಮೇಲೆ ಅವರು ಯೋಗರ್ಟ್ ಸೇವಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ. ಫ್ರಾನ್ಸ್ ಫುಟ್ಬಾಲ್ ತಂಡದಿಂದಾಗಿ ಇವರ ಚೀಸ್ ವ್ಯಾಪಾರದ ಭರಾಟೆ ಜೋರಾಗಿದೆ.