ಬೆಂಗಳೂರು, ಜು.6- ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸುವ ಶಿಕ್ಷಣ ಪ್ರಸ್ತುತದಲ್ಲಿ ಅಗತ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಚ್ಬಿಆರ್ ಲೇಔಟ್ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆರ್ಫಾ ಟೈನಿ ಟಾಟ್ಸ್ ಮಾಂಟೆನ್ಸರಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಬಾಲ್ಯದಿಂದಲೇ ಪರಿಸರದ ಬಗ್ಗೆ ಪ್ರೀತಿ ಬೆಳೆಸಿದರೆ ಅವರ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಇದರ ಮೂಲಕ ಪರಿಸರ ಉಳಿಸಲು ಕೊಡುಗೆ ನೀಡುತ್ತಾರೆ ಎಂದರು. ಮೇಯರ್ ಸಂಪತ್ರಾಜ್ ಮಾತನಾಡಿ, ನಗರದಲ್ಲಿ ದಿನೇ ದಿನೇ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ಉಳಿಸಲು ಶಾಲೆಗಳು ಈ ರೀತಿಯ ಸಣ್ಣ ಪ್ರಮಾಣದ ಕಾರ್ಯಕ್ರಮಗಳನ್ನು ಕೈಗೊಂಡಲ್ಲಿ ಬಹಳಷ್ಟು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಇತರೆ ಶಿಕ್ಷಣ ಸಂಸ್ಥೆಗಳು ಸಹ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.
ಸಂಸ್ಥೆಯ ಸಿಇಒ ಪಾಷ ಮಾತನಾಡಿ, ಮೋರ್ಗೆನೆಲ್ ವರ್ಡಿಂಗ್ಸ್ ಅಡಿ ಐಟಿ ವೈದ್ಯಕೀಯ ಕ್ಷೇತ್ರ, ಮಾನವ ಸಂಪನ್ಮೂಲ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದೇವೆ. ಆರ್ಫಾ ಟೈನಿ ಟಾಟ್ಸ್ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ನಾವು ಕಾಲಿಡುತ್ತಿರುವುದು ಸಂತಸದ ವಿಷಯ ಎಂದರು.
ಪಾಲಿಕೆ ಸದಸ್ಯರಾದ ಎ.ಆರ್.ಜಾಕೀರ್, ರಾಧಮ್ಮ ವೆಂಕಟೇಶ್ ಸೇರಿದಂತೆ ಮತ್ತಿತರರಿದ್ದರು.