ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಬಜೆಟ್ ಮಂಡಿಸಿದ್ದೆನೆ – ಮುಖ್ಯಮಂತ್ರಿ

 

ಬೆಂಗಳೂರು, ಜು.6- ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಬಜೆಟ್ ಮಂಡಿಸಲಾಗಿದ್ದು, ಅರ್ಥವಾಗದವರಿಗೆ ಏನು ಹೇಳುವುದಕ್ಕೆ ಆಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಜಗಜೀವನರಾಮ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕರಾವಳಿ ಭಾಗದ ಶಾಸಕರು ಮಹತ್ಮಾಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸುತ್ತಿರುವ ಬಗ್ಗೆ ಗಮನ ಸೆಳೆದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನ ಮುಂದುವರೆದ ಭಾಗವಿದು. ಸಿದ್ದರಾಮಯ್ಯ ಅವರೇ ತಮ್ಮ ಬಜೆಟ್‍ನಲ್ಲಿ ಮೀನುಗಾರರ ಸಮಸ್ಯೆಗೆ 150 ಕೋಟಿ ರೂ. ಹಣ ಮೀಸಲಿಟ್ಟದ್ದರು ಎಂದರು.
ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕ್ಲಸ್ಟರ್ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಒಟ್ಟಾರೆ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಾಗಿದೆ. ಟೀಕೆ ಮಾಡಿದಂತೆ ನಮ್ಮ ಬಜೆಟ್ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಅರ್ಥವಾಗುವುದಿಲ್ಲ ಎಂದರೆ ಏನು ಮಾಡಲು ಸಾಧ್ಯವಾಗುವುದಿಲ್ಲ. ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಚರ್ಚೆ ನಡೆಸಲಿ. ಅವರಿಗೆ ಉತ್ತರ ಕೊಡಲು ಸಿದ್ಧವಿರುವುದಾಗಿ ಹೇಳಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ್‍ಖರ್ಗೆ, ಮೇಯರ್ ಸಂಪತ್‍ರಾಜ್, ಶಾಸಕರಾದ ಬೈರತಿಬಸವರಾಜ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ