ಮಾರಕ ನಿಫಾ ಕಾಯಿಲೆಗೂ ಮಾವಿನ ಹಣ್ಣಿಗೂ ಯಾವುದೇ ಸಂಬಂಧವಿಲ್ಲ – ಸಚಿವ ಕೃಷ್ಣ ಭೆರೇಗೌಡ

 

ಬೆಂಗಳೂರು, ಜು.6-ಮಾರಕ ನಿಫಾ ಕಾಯಿಲೆಗೂ ಮಾವಿನ ಹಣ್ಣಿಗೂ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ಅಪಪ್ರಚಾರ ನಡೆದಿದ್ದರಿಂದ ಮಾವಿನ ಹಣ್ಣಿನ ಬಳಕೆ ಕುಸಿತಗೊಂಡು ನಷ್ಟ ಸಂಭವಿಸಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಸಚಿವ ಕೃಷ್ಣ ಭೆರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಮಾವಿನ ಬೆಳೆ ಹಾನಿ ಬಗ್ಗೆ ಸ್ವತಃ ಸರ್ಕಾರದ ಗಮನಸೆಳೆದು ಕೋಲಾರದಲ್ಲಿ ಅದರಲ್ಲೂ ತಮ್ಮ ಕ್ಷೇತ್ರದಲ್ಲಿ ರೈತರು ಮಾವಿನಿಂದ ನಷ್ಟ ಅನುಭವಿಸುತ್ತಿದ್ದಾರೆ. ಈ ಅಧಿವೇಶನ ಮುಗಿಯುವ ವೇಳೆಗೆ ಸರ್ಕಾರ ಅವರ ನೆರವಿಗೆ ಧಾವಿಸಲಿ ಎಂದು ಮನವಿ ಮಾಡಿದರು.
ಸ್ವಯಂಪ್ರೇರಿತರಾಗಿ ಎದ್ದು ನಿಂತ ಸಚಿವ ಕೃಷ್ಣಭೆರೇಗೌಡ, ನೀವು ಮಾವಿನ ವಿಚಾರ ಪ್ರಸ್ತಾಪಿಸಿದ್ದರಿಂದ ನಾನು ಕೆಲವು ವಿಷಯ ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂದು ಹೇಳುತ್ತಾ ನಿಫಾ ರೋಗ ಮತ್ತು ಮಾವು ಬೆಳೆಗಳಿಗೆ ಗಂಟು ಹಾಕಲಾಗಿದೆ. ಮಾವು ಬೆಳೆಗೂ, ನಿಫಾ ರೋಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾವಿನ ಹಣ್ಣಿನಿಂದ ನಿಫಾ ರೋಗ ಬರುತ್ತದೆ ಎಂಬುದು ಸಂಪೂರ್ಣ ಸುಳ್ಳು ವದಂತಿ. ಆದರೂ ಇದು ವ್ಯಾಪಕವಾಗಿ ಪ್ರಚಾರಗೊಂಡಿದೆ. ಜನ ಕೂಡ ಇದನ್ನು ನಂಬಿ ಮಾವು ಖರೀದಿಸಲು ಹಿಂದೇಟು ಹಾಕಿದ್ದರು. ಇದರಿಂದ ಮಾವಿನ ಬೆಲೆ ಕುಸಿತವಾಗಿ ರೈತರು ಹಣ್ಣುಗಳನ್ನು ರಸ್ತೆಗೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಪ್ರವೇಶಿಸಿದ ಸಚಿವ ಶಿವಾನಂದಪಾಟೀಲ್, ರಾಮನಗರ ಜಿಲ್ಲೆಯಲ್ಲಿ ಈ ಬಗ್ಗೆ ವ್ಯಾಪಕ ಅಪಪ್ರಚಾರ ನಡೆದಿದ್ದವು. ಕೂಡಲೇ ನಮ್ಮ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಅಲ್ಲಿ ಸ್ಥಳ ಪರಿಶೀಲನೆ ನಡೆಸುವ ಮೂಲಕ ಮಾವಿನ ಹಣ್ಣಿಗೂ ಹಾಗೂ ನಿಫಾ ರೋಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಡಿಸಲಾಗಿದೆ ಎಂದು ಹೇಳಿದರು. ಸರ್ಕಾರ ಕೊಟ್ಟ ಸ್ಪಷ್ಟನೆಗಳನ್ನು ಹೆಚ್ಚು ಪ್ರಚಾರಗೊಳಿಸುವುದಿಲ್ಲ. ಆದರೆ ಅಪಪ್ರಚಾರಗಳು ಹೆಚ್ಚು ವ್ಯಾಪಕಗೊಳ್ಳುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಪೀಕರ್ ರಮೇಶ್‍ಕುಮಾರ್ ಮಾತನಾಡಿ, ಮಾಧ್ಯಮಗಳು ತಮ್ಮ ವಿವೇಚನೆಗೆ ತಕ್ಕಂತೆ ಸುದ್ದಿ ಮಾಡುತ್ತವೆ. ಅದನ್ನು ಪ್ರಶ್ನೆ ಮಾಡಲಾಗುವುದಿಲ್ಲ. ಮಾವಿನ ಬೆಲೆ ಕುಸಿತದ ಅಪಪ್ರಚಾರ ಒಂದು ಕಾರಣ, ಹೂ ಬಿಟ್ಟ ಕಾಲದಲ್ಲಿ ಜೋರು ಮಳೆ ಬಂದಿತ್ತು. ಕಾಯಿ ಕಟ್ಟುವ ಕಾಲದಲ್ಲಿ ಹಣ್ಣುಗಳ ಮೇಲೆ ಕಲೆ ಕಾಣಿಸಿಕೊಂಡಿತ್ತು ಎಂದರು. ಇದಕ್ಕಾಗಿ ಉತ್ತರಭಾರತದಿಂದ ಹೆಚ್ಚು ಮಾವು ಬಂದು ಮಾವಿನ ಬೆಲೆ ಕುಸಿತ ಉಂಟಾಗಿದೆ. ಸರ್ಕಾರ ಈ ತಕ್ಷಣದಿಂದ ಅಧಿವೇಶನ ಮುಗಿಯುವುದರೊಳಗೆ ರೈತರ ನೆರವಿಗೆ ಧಾವಿಸುವಂತೆ ಸಲಹೆ ನೀಡಿದರು.
ಚರ್ಚೆ ವಿಷಯವನ್ನು ತೋಟಗಾರಿಕಾ ಸಚಿವರ ಗಮನಕ್ಕೆ ತಂದು ನೆರವು ಕೊಡಿಸುವುದಾಗಿ ಸಚಿವ ಕೃಷ್ಣಭೆರೇಗೌಡ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ