ನವದೆಹಲಿ, ಜು.6-ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ನಿನ್ನೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದ ಇಂಧನ ದರಗಳು ಇಂದು ಅದೇ ಸ್ಥಿತಿಯಲ್ಲಿ ಮುಂದುವರಿದಿದೆ.
ಇಂದು ಬೆಳಗ್ಗೆ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 14 ರಿಂದ 15 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್ ದರ ಕೂಡ 16 ರಿಂದ 18 ಪೈಸೆಯಷ್ಟು ಹೆಚ್ಚಳವಾಗಿದೆ. ಕಳೆದ 15 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಕಚ್ಚಾ ತೈಲ ದರ ಇದೀಗ ತನ್ನ ಪಥ ಬದಲಿಸಿದ್ದು, ಏರಿಕೆಯತ್ತ ಸಾಗಿದೆ. ಸರ್ಕಾರಿ ಒಡೆತನದ ಇಂಧನ ಸಂಸ್ಥೆಗಳಾದ ಭಾರತೀಯ ತೈಲ ನಿಗಮ(ಐಒಸಿ), ಭಾರತ್ ಪೆಟ್ರೋಲಿಯಂ (ಬಿಪಿ), ಹಿಂದೂಸ್ತಾನ್ ಪೆಟ್ರೋಲಿಯಂ(ಎಚ್ಪಿ) ಸಂಸ್ಥೆಗಳು ಇಂದು ಬೆಳಗ್ಗೆ 6 ಗಂಟೆ ವೇಳೆ ಇಂಧನ ದರಗಳನ್ನು ಪರಿಷ್ಕರಣೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್ಗೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು ಹೆಚ್ಚಳ ಮಾಡಿತ್ತು.