ನವದೆಹಲಿ, ಜು.6-ಭಾರತದ ಮುಖ್ಯ ನ್ಯಾಯಮೂರ್ತಿ ಅವರು ರೋಸ್ಟರ್ ಮಾಸ್ಟರ್ (ಸರದಿಪಟ್ಟಿಯಲ್ಲಿ ಅಗ್ರಮಾನ್ಯರು) ಎಂದು ಪುನರುಚ್ಚರಿಸಿರುವ ಸುಪ್ರೀಂಕೋರ್ಟ್, ಅವರು ವಿಶೇಷಾಧಿಕಾರ ಹೊಂದಿರುತ್ತಾರೆ ಹಾಗೂ ಸರ್ವೋಚ್ಚ ನ್ಯಾಯಾಲಯದ ವಿವಿಧ ಪೀಠಗಳಿಗೆ ಪ್ರಕರಣಗಳನ್ನು ಇತ್ಯರ್ಥಕ್ಕಾಗಿ ಹಂಚುವ ಅಧಿಕಾರಿ ಅವರಿಗಿದೆ ಎಂದು ಹೇಳಿದೆ. ಹಿರಿಯ ನ್ಯಾಯಮೂರ್ತಿಗಳಾದ ಎ.ಕೆ.ಸುಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠವು ಪ್ರತ್ಯೇಕ ಆದರೆ ಒಮ್ಮತದ ತೀರ್ಪುಗಳನ್ನು ನೀಡಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ ಹಾಗೂ ಪ್ರಕರಣಗಳನ್ನು ಮಂಜೂರು ಮಾಡುವುದೂ ಸೇರಿದಂತೆ ಕೋರ್ಟ್ ಆಡಳಿತದಲ್ಲಿ ನಾಯಕತ್ವದ ಪ್ರದತ್ತ ಅಧಿಕಾರ ಚಲಾಯಿಸುವ ವಿಶೇಷಾಧಿಕಾರ ಹೊಂದಿರುತ್ತಾರೆ ಎಂದು ಹೇಳಿದೆ. ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಂದ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹಂಚಿಕೆ ಮಾಡುವ ಈಗಿನ ರೋಸ್ಟರ್ ವಿಧಾನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮತ್ತು ಮೂವರು ನ್ಯಾಯಮೂರ್ತಿಗಳ ಪೀಠವೊಂದು ಈಗಾಗಲೇ ಸಿಜೆಐ ಅವರು ರೋಸ್ಟರ್ ಮಾಸ್ಟರ್(ಸಮಾನರಲ್ಲಿ ಮೊದಲಿಗರು ಹಾಗೂ ಸರದಿಪಟ್ಟಿಯಲ್ಲಿ ಅಗ್ರಮಾನ್ಯರು) ಎಂದು ತೀರ್ಪು ನೀಡಿತ್ತು. ಇಂದು ಇಬ್ಬರು ಹಿರಿಯ ನ್ಯಾಯಾಧೀಶರ ಪೀಠವು ಆದನ್ನು ಪುನರುಚ್ಚರಿಸಿದೆ.