ಜಮ್ಮು ಮತ್ತು ಕಾಶ್ಮೀರ: ಉಗ್ರರಿಂದ ಅಪಹರಣಕ್ಕೀಡಾಗಿದ್ದ ಪೊಲೀಸ್ ಪೇದೆ ಮೃತ ದೇಹ ಪತ್ತೆ!

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಬ್ಬ ಭದ್ರತಾ ಸಿಬ್ಬಂದಿಯನ್ನು ಉಗ್ರರು ಅಪಹರಿಸಿ ಕೊಂದು ಹಾಕಿದ್ದಾರೆ.
ಈದ್ ಹಬ್ಬಕ್ಕೆ ಮನೆಗೆ ಬರುತ್ತಿದ್ದ ಸೈನಿಕ ಔರಂಗಾಜೇಬ್ ಅವರ ಅಪಹರಣ ಮತ್ತು ಕೊಲೆಯ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಅಂತಹದೇ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದ್ದು, ನಿನ್ನೆ ರಾತ್ರಿ ಶೋಪಿಯಾನ್ ಜಿಲ್ಲೆಯಿಂದ ಉಗ್ರರು ಅಪರಹಣ ಮಾಡಿದ್ದ ಪೊಲೀಸ್ ಪೇದೆ ಜಾವೆದ್ ಅಹ್ಮದ್ ದರ್ ಮೃತ ದೇಹ ಶೋಪಿಯಾನ್ ಹೊರವಲಯದಲ್ಲಿ ಪತ್ತೆಯಾಗಿದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೊಲೀಸ್ ಇಲಾಖೆಯ ಕಾನ್‌ ಸ್ಟೆಬಲ್ ಜಾವಿದ್ ಅಹಮದ್ ದರ್ (27 ವರ್ಷ) ರನ್ನು ಗುರುವಾರ ರಾತ್ರಿ 9.30ಕ್ಕೆ ಸ್ವಗ್ರಾಮ ವೆಹಿಲ್ ಚಟ್ವಾಟನ್‌ನಲ್ಲಿರುವ ಅವರ ಮನೆಯ ಸಮೀಪದ ಮೆಡಿಕಲ್ ಸ್ಟೋರ್‌ನಿಂದ ಬಂದೂಕು ತೋರಿಸಿ ಉಗ್ರರು ಅಪಹರಣ ಮಾಡಿದ್ದರು. ಅಪಹರಣದ ವೇಳೆ ಜಾವೆದ್ ಕರ್ತವ್ಯದ ಮೇಲೆ ಇರಲಿಲ್ಲ. ಇದೀಗ ಜಾವೆದ್ ಮೃತ ದೇಹ ಪತ್ತೆಯಾಗಿದ್ದು, ಹಿಂಸೆ ನೀಡಿ ಗುಂಡು ಹಾರಿಸಿ ಜಾವೆದ್ ರನ್ನು ಕೊಂದು ಹಾಕಲಾಗಿದೆ.
ಜಾವಿದ್ ಅವರ ಮೃತ ದೇಹವು ಪರಿವಾನ್ ಕುಲ್ಗಾಮ್ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಘಟನಾ ಪ್ರದೇಶಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಪೇದೆ ಜಾವೆದ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಾಲಿಂದರ್ ಮಿಶ್ರಾ ಅವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ