ಸುಸ್ತಿಬೆಳೆಯ ಸಾಲ ಒಂದೇ ಹಂತದಲ್ಲಿ ಮನ್ನಾ

 

ಬೆಂಗಳೂರು, ಜು.5- ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಮಹತ್ವದ ಯೋಜನೆಯನ್ನು ಬಜೆಟ್‍ನಲ್ಲಿ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಹಾಗೂ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರೈತರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಾರೆ.
ಸುಮಾರು 2,18,488 ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಅವರು, ಸಂಕಷ್ಟದಲ್ಲಿರುವ ಅನ್ನದಾತನ ಬದುಕನ್ನು ಹಸನುಗೊಳಿಸಲು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 31-12-2017ರವರೆಗೆ ರೈತರು ಪಡೆದಿರುವ ಸುಸ್ತಿಬೆಳೆಯ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡುವುದಾಗಿ ಪ್ರಕಟಿಸಿದರು.
ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಮತ್ತು ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರು ಸೇರಿದಂತೆ ಅನರ್ಹ ಕೃಷಿ ಸಾಲಗಾರರು ಈ ಯೋಜನೆಯಿಂದ ಹೊರಗಿರುತ್ತಾರೆ.
ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 34 ಸಾವಿರ ಕೋಟಿ ಹೊರೆಯಾಗಲಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಎಲ್ಲ ಯೋಜನೆಗಳನ್ನು ಮುಂದುವರೆಸಿರುವ ದೋಸ್ತಿ ಸರ್ಕಾರ ಇಂದಿರಾ ಕ್ಯಾಂಟೀನ್‍ಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಪ್ರಾರಂಭಿಸಲು ತೀರ್ಮಾನಿಸಿದೆ.
ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಒದಗಿಸಲು ಜಾರಿ ಮಾಡಲಾಗಿದ್ದ ಆರೋಗ್ಯ ಕರ್ನಾಟಕ ಯೋಜನೆಯನ್ನು ಮುಂದುವರೆಸಲಾಗಿದ್ದು, ಕಲಬುರಗಿ, ಬೆಳಗಾವಿ, ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ರೋಗಿಗಳಿಗಾಗಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಮನಗರ ಜಿಲ್ಲೆ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯ ಹೊಸ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್‍ಸ್ಪೇಷಾಲಿಟಿ ಆಸ್ಪತ್ರೆ ತೆರೆಯಲು 40 ಕೋಟಿ ಮೀಸಲಿರಿಸಲಾಗಿದೆ.
ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿಯನ್ನು ಅಳವಡಿಸಿಕೊಳ್ಳಲು ಕೋಲಾರ, ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.
ತಲಾ 5 ಸಾವಿರ ಹೆಕ್ಟೇರ್ ಕುಷ್ಕಿ ಜಮೀನಿನಲ್ಲಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ಆರ್ಥಿಕ ನೆರವು ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ