ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕಳೆದುಕೊಳ್ತಾರಾ ಸಿದ್ದರಾಮಯ್ಯ?

ಬೆಂಗಳೂರು: ಅಸಮಾಧಾನದ ಬೇಗುದಿಯಲ್ಲೇ ಇರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಅನ್ನೋ ಮಾತು ಕೇಳಿಬಂದಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಹುದ್ದೆಯಲ್ಲಿದ್ದುಕೊಂಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿಲ್ಲವಂತೆ. ಅಧಿವೇಶನದ ವೇಳೆ ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕರ ಸಭೆ ನಡೆಸಿದ್ದು ಬಿಟ್ರೆ ಬೇರೇನೂ ಮಾಡಿಲ್ಲ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಪಕ್ಷದ ಕಡೆಯಿಂದ ಯಾರು ಮಾತಾಡಬೇಕು ಅನ್ನೋದನ್ನು ತೀರ್ಮಾನಿಸಿಲ್ಲ ಎಂಬ ಆರೋಪಗಳು ಪಕ್ಷದಲ್ಲಿ ಕೇಳಿ ಬಂದಿವೆ.

ಈ ಸಂಬಂಧ ಪಕ್ಷದಲ್ಲಿಯ ಕೆಲ ಮುಖಂಡರು ಹೈಕಮಾಂಡ್ ಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸಿ ಆ ಜಾಗದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರನ್ನು ಕೂರಿಸುವ ಕಸರತ್ತು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಬುಧವಾರ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಜಾಗಕ್ಕೆ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿದೆ. ಸಿದ್ದರಾಮಯ್ಯರ ಆಪ್ತರಾದ ಗುಂಡೂರಾವ್ ಕೆಪಿಸಿಸಿ ನೂತನ ಸಾರಥಿ ನೇಮಕವಾದ ಬಳಿಕ ಪರಮೇಶ್ವರ್ ಬಣಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ