ಪ್ರಿ-ಕ್ವಾರ್ಟರ್ ಹಂತಕ್ಕೆ ಫಿಫಾ ವಿಶ್ವಕಪ್ ಫುಟ್ಬಾಲ್-2018

ಮಾಸ್ಕೋ, ಜು.4-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪ್ರಿ-ಕ್ವಾರ್ಟರ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ಪೆನಾಲ್ಟಿ ಶೂಟ್-ಔಟ್‍ನಲ್ಲಿ ಬಲಿಷ್ಠ ಕೊಲಂಬಿಯಾ ತಂಡವನ್ನು 4-3 ಗೋಲುಗಳಿಂದ ಮಣಿಸಿ ಎಂಟರ ಘಟ್ಟಕ್ಕೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಎರಡೂ ತಂಡಗಳು ಪೂರ್ಣಾವಧಿ ವೇಳೆ 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. 93ನೇ ನಿಮಿಷದಲ್ಲಿ ದಕ್ಷಿಣ ಅಮೆರಿಕ ತಂಡವಾದ ಕೊಲಂಬಿಯಾ ಸಮಬಲದ ಗೋಲು ಬಾರಿಸಿ ಆಂಗ್ಲರ ತಂಡಕ್ಕೆ ನಿರಾಶೆ ಮೂಡಿಸಿತ್ತು.
ನಾಕೌಟ್ ಹಂತ ಕದನ ಕೌತುಕ ಕೆರಳಿಸಿದ್ದು, ಈ ಸುತ್ತಿಗೆ ಪ್ರವೇಶ ಪಡೆದಿರುವ 16 ತಂಡಗಳು ಮುಂದಿನ ಹಂತ ತಲುಪಲು ತೀವ್ರ ಹೋರಾಟ ನಡೆಸಲಿವೆ. ಎರಡು ತಂಡಗಳ ಆಟಗಾರರ ತೀವ್ರ ಪೈಪೆÇೀಟಿ ಕ್ರೀಡಾಭಿಮಾನಿಗಳಲ್ಲಿ ಕದನಕೌತುಕ ಕೆರಳಿಸಿತ್ತು.
ಮೊದಲಾರ್ಧದಲ್ಲೇ ಉಭಯ ತಂಡಗಳ ಆಟಗಾರರು ಗೋಲು ಬಾರಿಸಲು ಯತ್ನಿಸಿದರೂ ಫಲ ಲಭಿಸಲಿಲ್ಲ. ಆದರೆ ದ್ವಿತೀಯಾರ್ಧದಲ್ಲೂ ಇದು ಮುಂದುವರಿಯಿತು. ಪಂದ್ಯದ 57ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿಕೇನ್ ಪೆನಾಲ್ಟಿ ಕಿಕ್ ಮೂಲಕ ಗೋಲು ಬಾರಿಸಿ, ತಂಡಕ್ಕೆ 1-0 ಗೋಲುಗಳ ಮುನ್ನಡೆ ದಕ್ಕಿಸಿಕೊಟ್ಟರು.
ಆದರೆ 90+3ನೇ ನಿಮಿಷದಲ್ಲಿ ಕೊಲಂಬಿಯಾದ ಯರ್ರಿ ಮಿನಾ ಬಾರಿಸಿದ ಗೋಲಿನಿಂದಾಗಿ ಪಂದ್ಯ ಪೂರ್ಣಾವಧಿ ವೇಳೆಗೆ 1-1ರಲ್ಲಿ ಸಮವಾಯಿತು.
ಸ್ಪಷ್ಟ ಫಲಿತಾಂಶಕ್ಕಾಗಿ ನೀಡಲಾದ ಹೆಚ್ಚುವರಿ ಅವಧಿಯಲ್ಲೂ ಗೋಲು ಗಳಿಸಲು ಇಂಗ್ಲೆಂಡ್ ಮತ್ತು ಕೊಲಂಬಿಯಾ ತಂಡಗಳಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್‍ಗೆ ಮೊರೆ ಹೋಗಲಾಯಿತು.
ಮಾರ್ಟೆನ ಉರಿಬ್ ಮತ್ತು ಕಾರ್ಲೊಸ್ ಬಕ್ಕಾ ತಮ್ಮ ಹೊಡೆತವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರೂ, ಎರಿಕ್ ಡಿಯರ್ ಇಂಗ್ಲೆಂಡ್ ಗೆಲುವಿನ ರೂವಾರಿ ಎನಿಸಿದರು. ವಿಶ್ವಕಪ್‍ನಲ್ಲಿ ಇದೇ ಮೊದಲ ಬಾರಿ ಶೂಟೌಟ್ ಎದುರಿಸಿದ ಕೊಲಂಬಿಯಾ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಶೂಟೌಟ್‍ಗೆ ಮುನ್ನ ಜೇಮ್ಸ್ ರೋಡ್ರಿಗಸ್ ಗಾಯಾಳುವಾಗಿ ನಿರ್ಗಮಿಸಿದ್ದು ತಂಡದ ಪಾಲಿಗೆ ಮುಳುವಾಯಿತು.
ಕೊಲಂಬಿಯಾ ತಂಡವನ್ನು 4-3 ಗೋಲುಗಳಿಂದ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಸಫಲವಾಗಿದೆ. ಹ್ಯಾರಿಕೇನ್‍ಗೆ ಗೋಲ್ಡನ್ ಬೂಟ್ ಅವಕಾಶ : ಇಂಗ್ಲೆಂಡ್ ನಾಯಕ ಹ್ಯಾರಿಕೇನ್ ವಿಶ್ವಕಪ್ ಫುಟ್ಬಾಲ್‍ನಲ್ಲಿ ಒಟ್ಟು ಆರು ಗೋಲುಗಳನ್ನು ಬಾರಿಸುವ ಮೂಲಕ ಬಂಗಾರದ ಬೂಟು ಗೆಲ್ಲುವ ಸ್ಪರ್ಧೆಯಲ್ಲಿ ತಮ್ಮ ಸ್ತಾನವನ್ನು ಮತ್ತಷ್ಟು ಭದ್ರಗೊಳಿಸಿದ್ದಾರೆ. ಬಲಿಷ್ಠ ಸ್ವಿಟ್ಜರ್‍ಲೆಂಡ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿದ ಸ್ವೀಡನ್ ತಂಡ ಎಂಟರಘಟ್ಟದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಕ್ವಾರ್ಟರ್ ಫೈನಲ್‍ನಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ, ರಷ್ಯಾ ಮತ್ತು ಕ್ರೊವೇಷ್ಯಾ ನಡುವಣ ಹಣಾಹಣಿಯಲ್ಲಿ ವಿಜೇತ ತಂಡವನ್ನು ಇಂಗ್ಲೆಂಡ್ ಎದುರಿಸಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ