ಶಾಸಕ ಭವನದಲ್ಲಿನ ಕಾನೂನು ಬಾಹಿರ ಚಟುವಟಿಕೆ ದೂರು-ಕೆಲವು ಕಠಿಣ ಕ್ರಮ-ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸ್ಪಷ್ಟನೆ

 

ಬೆಂಗಳೂರು, ಜು.4- ಶಾಸಕ ಭವನದಲ್ಲಿನ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ನಾವು ಜನರ ಮುಂದೆ ಗೌರವ ಕಳೆದುಕೊಳ್ಳುವಂತಾಗಬಾರದು ಎಂಬ ಕಾರಣಕ್ಕೆ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸ್ಪಷ್ಟ ಪಡಿಸಿದರು.
ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಮಾಜಿ ಮುಖ್ಯಮಂತ್ರಿಗಳ ಆಸನದ ವ್ಯವಸ್ಥೆ ಮತ್ತು ಶಾಸಕರ ಭವನಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ತಮ್ಮ ಆಸನದಲ್ಲಿ ಕೂರುತ್ತಿಲ್ಲ. ಬೇರೆ ಬೇರೆ ಜಾಗದಲ್ಲಿ ಕೂರುತ್ತಾರೆ ಯಾಕೆ ಎಂದು ಕೇಳಿದರು.
ಇದಕ್ಕೆ ಸ್ವಯಂ ಪ್ರೇರಿತವಾಗಿ ಉತ್ತರ ನೀಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಹಿರಿತನ ಆಧರಿಸಿ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ನನ್ನ ವೈಯಕ್ತಿಯ ದ್ವೇಷವೇನು ಇಲ್ಲ. ರೇವಣ್ಣ ಅವರಿಗೆ ನೀಡಲಾಗಿರುವ ಆಸನದ ಬಗ್ಗೆ ಅಸಮಧಾನ ಇರಬಹುದು. ನಿಯಮದ ಪ್ರಕಾರ ಮೊದಲ ಸಾಲಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ನಂತರ ಅತ್ಯಂತ ಹಿರಿಯ ಶಾಸಕರಾದ ಸಚಿವ ದೇಶಪಾಂಡೆ, ಡಿ.ಕೆ.ಶಿವಕುಮಾರ್ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣ ಬೈರೇಗೌಡ ನಂತರ ಎಚ್.ಡಿ.ರೇವಣ್ಣ ಅವರಿಗೆ ಆಸನ ಕಲ್ಪಿಸಲಾಗಿದೆ. ಅವರಿಗೆ ಅಸಮಾಧಾನ ಇದ್ದರೆ ಚರ್ಚೆ ಮಾಡಿ ಸರಿ ಪಡಿಸುವುದಾಗಿ ಭರವಸೆ ನೀಡಿದರು.
ಮುಂದುವರೆದು ಮಾತನಾಡಿದ ರಮೇಶ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿಯೂ ಕೆಲಸ ಮಾಡಿದವರು. ಅವರಿಗೂ ದೂರದಲ್ಲಿ ಆಸನ ವ್ಯವಸ್ಥೆ ಮಾಡಬೇಕಿದೆ. ನಿಯಮದ ಪ್ರಕಾರ ಬಲಭಾಗದಲ್ಲಿ ವಿಧಾನಸಭೆಯ ಉಪಾಧ್ಯಕ್ಷರು ನಂತರ ಪ್ರತಿಪಕ್ಷದ ನಾಯಕ ಯಡಿಯೂರಪ್ಪ, ಉಪ ನಾಯಕ ಗೋವಿಂದ ಕಾರಜೋಳ ನಂತರ ಜಗದೀಶ್ ಶೆಟ್ಟರ್ ಅವರು ಕೂರುತ್ತಿದ್ದಾರೆ. ಈ ಬಗ್ಗೆ ನನಗೂ ಸ್ವಲ್ಪ ನೋವಿದೆ ಆದರೆ ನಿಯಮಾನುಸಾರ ಈ ರೀತಿ ಆಸನ ವ್ಯವಸ್ಥೆ ಮಾಡವುದು ಅನಿವಾರ್ಯವಿದೆ ಎಂದರು.
ಇನ್ನೂ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಸಿದ್ದರಾಮಯ್ಯ ಅವರಿಗೆ ಎಲ್ಲಿ ಆಸನದ ವ್ಯವಸ್ಥೆ ಮಾಡಬೇಕು ಎಂದು ನಾನು ಕೇಳಿದೆ. ಅವರು ಹಿಂದಿನ ಸಾಲಿನಲ್ಲಿ ಕೂರುತ್ತೇನೆ ಎಂದು ಹೇಳಿದ್ದರಿಂದ ಅವರು ಹೇಳಿದಂತೆ ವ್ಯವಸ್ಥೆ ಮಾಡಲಾಗಿದೆ. ನಮಗೂ ಸೌಜನ್ಯವಿದೆ, ಆದಷ್ಟು ಹೊಂದಾಣಿಕೆಯಲ್ಲಿ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಚರ್ಚೆ ನಡೆಯುತ್ತಿದ್ದ ವೇಳೆ ಜೆ.ಸಿ.ಮಾಧುಸ್ವಾಮಿ ಅವರು, ಶಾಸಕರ ಭವನಕ್ಕೆ ಬರುವ ಸಂದರ್ಶಕರ ವಾಹನಗಳಿಗೆ ಪಾಸು ಕೊಡಿ ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ಶಾಸಕರ ಭವನಕ್ಕೆ ಸಾರ್ವಜನಿಕರು ಬರಲು ಅಡ್ಡಿ ಇಲ್ಲ, ಆದರೆ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಇಲ್ಲ. ಎಷ್ಟು ದೂರವಾದರೂ ಸರಿ ನಿಲ್ಲಿಸಿ ಬರಲಿ. ಶಾಸಕರಿಗೆ ವೋಟು ಹಾಕಿದವರು ಕ್ಷೇತ್ರದಿಂದ ಕಾರು ಮಾಡಿಕೊಂಡು ಬರುವುದಿಲ್ಲ. ನನಗೆ 30 ವರ್ಷಗಳ ಅನುಭವ ಇದೆ. ಶಾಸಕರೆಂದರೆ ಜನ ಮೂಗೆಳೆಯುವ ಸ್ಥಿತಿ ನಿರ್ಮಾಣವಾಗಿದೆ. ಅದನ್ನು ಮರುಸ್ಥಾಪಿಸಬೇಕಿದೆ. ನಿಮ್ಮೇಲ್ಲರ ಗೌರವ ಕಾಪಾಡಬೇಕು ಎಂದು ನಾನು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ನಮ್ಮ ಗೌರವ ಹಾಳಾದರೂ ಪರವಾಗಿಲ್ಲ ಎಂದು ನೀವೆಲ್ಲಾ ಸೇರಿ ನಿರ್ಣಯ ಮಾಡಿದರೆ ನನ್ನ ಆಕ್ಷೇಪವೇನು ಇಲ್ಲ ಎಂದು ಶಾಸಕ ಬಾಯಿ ಮುಚ್ಚಿಸಿದರು.
ಶಾಸಕರ ಭವನಸದಲ್ಲಿ ಕೆಲವು ಕಹಿ ಅನುಭವಗಳಾಗಿವೆ. ಶಾಸಕರೊಬ್ಬರು ಸಭಾಧ್ಯಕ್ಷರ ಕಾರು ತೆಗೆದುಕೊಂಡು ಹೋಗಿ ರಾತ್ರಿ 11 ಗಂಟೆಯಾದರೂ ವಾಪಾಸ್ ಕಳುಹಿಸುವುದಿಲ್ಲ. ನಮ್ಮ ಚಾಲಕನಿಗೆ ಧಮಕಿ ಹಾಕಿ ಉಳಿಸಿಕೊಳ್ಳುತ್ತಾರೆ. ಕೊನೆಗೆ ನಾನು ಖಾಸಗಿ ಕಾರಿನಲ್ಲಿ ಸ್ಥಳಕ್ಕೆ ಹೋದಾಗ ಶಾಸಕರು ಪರಾರಿಯಾಗುತ್ತಾರೆ. ಮತ್ತೊಂದು ಘಟನೆಯಲ್ಲಿ ವಿಧಾನ ಪರಿಷತ್ ಸದಸ್ಯರು ಕುಟುಂಬ ಸಮೇತರಾಗಿ ಬಂದು ಶಾಸಕರ ಭವನದಲ್ಲಿ ತಂಗಿದ್ದರು. ಯಾರೋ ಕೆಲವರು ಶಾಸಕರ ಭವನ ಕೊಠಡಿಯ ಬಾಗಿಲು ತಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರಿನಲ್ಲಿ ಕೊಠಡಿ ಪಡೆಯಲಾಗಿದೆ. ಅಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕ್ರಮ ಕೈಗೊಳ್ಳಲು ನಿಮ್ಮ ಅನುಮತಿ ಬೇಕು ಎಂದು ಪೊಲೀಸರು ಕೇಳುತ್ತಿದ್ದಾರೆ. ಇಂತಹ ಹಲವು ಅನುಭವಗಳು ನನಗಾಗಿವೆ. ಆ ಹಿನ್ನೆಲೆಯಲ್ಲಿಯೇ ನಾನು ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದರು.
ಶಾಸಕರಿಗೂ ಖಾಸಗಿ ಬದುಕು ಬೇಕಿದೆ ಅದಕ್ಕಾಗಿ ಶಾಸಕರ ಭವನಕ್ಕೆ ಬಂದವರು ರಾತ್ರಿ 9 ಗಂಟೆಯ ನಂತರ ಅಲ್ಲಿಂದ ತೆರಳಬೇಕು, ಬೆಳಗ್ಗೆ 9 ಗಂಟೆ ನಂತರ ಬರಬೇಕು. ಖಾಸಗಿ ವಾಹನಗಳನ್ನು ಹೊರಗೆ ನಿಲ್ಲಿಸಬೇಕು ಎಂದು ಸ್ಪಿಕರ್ ಹೇಳಿದರು.

ಜೆಡಿಎಸ್-ಕಾಂಗ್ರೆಸ್ ಒತ್ತಾಯದ ಮದುವೆಯಾಗಿದ್ದು ಹೆಚ್ಚು ದಿನ ಸಂಸಾರ ನಡೆಯುವುದಿಲ್ಲ
ಬೆಂಗಳೂರು, ಜು.4- ಜೆಡಿಎಸ್-ಕಾಂಗ್ರೆಸ್ ಒತ್ತಾಯದ ಮದುವೆಯಾಗಿದ್ದು ಹೆಚ್ಚು ದಿನ ಸಂಸಾರ ನಡೆಯುವುದಿಲ್ಲ ಎಂದು ಪತಿಪಕ್ಷದ ಶಾಸಕರಾದ ಜಗದೀಶ್ ಶೆಟ್ಟರ್ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಅಭಿನಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎರಡು ಪಕ್ಷಗಳ ನಾಯಕರು ಚುನಾವಣೆಯ ಸಂದರ್ಭದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಈಗ ಬಲವಂತವಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಈ ಸಂಸಾರ ಹೆಚ್ಚು ದಿನ ನಡೆಯುವುದಿಲ್ಲ. ಶೀಘ್ರವೇ ಸರ್ಕಾರ ಪತನವಾಗಲಿದೆ ಎಂದರು.
ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಮದುವೆಯಾಗಿದೆ, ಸಂಸಾರ ಸುರುವಾಗಿದೆ. ಅವರಿಗೆ ಮಕ್ಕಳಾಗಿ ಉತ್ತಮವಾಗಿ ಸಂಸಾರ ನಡೆಸಲಿ ಎಂದು ನೀವು ಆರ್ಶಿವಾದ ಮಾಡುತ್ತಿರೋ ಅಥವಾ ವಿಚ್ಛೇಧನವಾಗಲಿ ಎಂದು ಶಾಪ ಹಾಕುತ್ತಿರೋ ಮೊದಲು ಹೇಳಿ. ಆಶಾಢದ ಚಳಿಗಾಲದಲ್ಲಿ ಪತಿ ಪತ್ನಿ ಜೊತೆಯಲ್ಲಿರಬಾರದು ಎಂಬ ನಿಯಮವಿದೆ. ಈ ಸಮ್ಮಿಶ್ರ ಸರ್ಕಾರ ಸಂಸಾರ ಮಾಡಬೇಕೆ ಬೇಡವೇ ಹೇಳಿ ಎಂದು ಹೇಳಿದರು.
ಇದು ಕೆಲ ಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿತ್ತು. ಈ ಸರ್ಕಾರ ಎಂಟು ತಿಂಗಳ ನಂತರ ನಡೆಯುವುದಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ