ಆಲಮಟ್ಟಿ ಅಣೆಕಟ್ಟು ಎತ್ತರ ಮತ್ತು ಅದಕ್ಕೆ ಪೂರಕವಾದ ಯೋಜನೆಗಳಿಗೆ ಕೋಟಿ 50ಸಾವಿರ ರೂ.- ಗೋವಿಂದಕಾರಜೋಳ ಒತ್ತಾಯ

 

ಬೆಂಗಳೂರು, ಜು.4- ಆಲಮಟ್ಟಿ ಅಣೆಕಟ್ಟು ಎತ್ತರ ಮತ್ತು ಅದಕ್ಕೆ ಪೂರಕವಾದ ಯೋಜನೆಗಳಿಗೆ ನಾಳೆ ಮಂಡಿಸುವ ಬಜೆಟ್‍ನಲ್ಲಿ ಕೋಟಿ 50ಸಾವಿರ ರೂ.ಗಳನ್ನು ನೀಡುವಂತೆ ಬಿಜೆಪಿಯ ಹಿರಿಯ ಶಾಸಕ ಗೋವಿಂದಕಾರಜೋಳ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು, ಬಿಜಾಪುರ ಜಿಲ್ಲೆ 300 ವರ್ಷಗಳಿಂದ ನಿರಂತರವಾಗಿ ಬರ ಪೀಡತವಾಗಿದೆ. ಕೃಷ್ಣಾಮೇಲ್ದಂಡೆ ವ್ಯಾಪ್ತಿಯ ಆಲಮಟ್ಟಿಯಲ್ಲಿ ಸತತವಾಗಿ ಐದು ವರ್ಷ ನೀರು ನಿಲ್ಲಿಸಿದರೆ ಆ ಭಾಗ ನಂದನವನವಾಗುತ್ತಿತ್ತು. ಕೃಷ್ಣಾ ಮೇಲ್ದಂಡೆಯಲ್ಲಿ ಕರ್ನಾಟಕಕ್ಕೆ 177 ಟಿಎಂಸಿ ನೀರು ಹಂಚಿಕೆಯಾಗಿದೆ. ಅದನ್ನು ಬಳಸಿಕೊಳ್ಳಲು ಸರಿಯಾದ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳ ಪ್ರಗತಿ ಕೇವಲ ಜಾಹೀರಾತುಗಳಲ್ಲೇ ಮಾತ್ರ ವಿದೆ. ಬೌದ್ಧಿಕ ಹಾಗೂ ಆರ್ಥಿಕವಾಗಿ ಯಾವುದೇ ಪ್ರಗತಿಯಾಗಿಲ್ಲ.

ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ 2012-13ನೇ ಸಾಲಿನಲ್ಲಿ 17,200ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಆಗಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ನಂತರ ಅಸ್ಥಿತ್ವಕ್ಕೆ ಬಂದ ಸಿದ್ದರಾಮಯ್ಯ ಅವರ ಸರ್ಕಾರ ಯೋಜನೆ ಜಾರಿಗೆ ಯಾವುದೇ ಪ್ರಯತ್ನ ಮಾಡಿಲ್ಲ.
ಈಗ ಯೋಜನೆಯ ವೆಚ್ಚ 70ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅದನ್ನು ಕಂತುಗಳ ರೂಪದಲ್ಲಿ ಕೊಟ್ಟರೆ ಸಾಲುವುದಿಲ್ಲ. ಒಂದೇ ಹಂತದಲ್ಲಿ ಹಣ ಬಿಡುಗಡೆ ಮಾಡಬೇಕು. ಕೃಷ್ಣಾಮೇಲ್ದಂಡೆ ಯೋಜನೆ ಆರಂಭವಾಗಿದ್ದು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅವರ ಮಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ನಾಳೆ ಬಜೆಟ್ ಮಂಡಿಸುತ್ತಿದ್ದಾರೆ. 50ಸಾವಿರ ಕೋಟಿ ರೂ.ಗಳನ್ನು ಈ ಬೆಜೆಟ್‍ನಲ್ಲಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಿಗೆ ಏತನೀರಾವರಿ ಯೋಜನೆ ಕಲ್ಪಿಸಿಕೊಡಬೇಕು. ಆದರೆ, ಯೋಜನೆ ಕೈಗೆತ್ತಿಕೊಳ್ಳುವ ಮೊದಲೇ ನಾಲೆಗಳನ್ನು ತೋಡಲಾಗಿದೆ. ಬರ ಪರಿಸ್ಥಿತಿಯಿಂದಾಗಿ ಜನ ಗುಳೆ ಹೋಗುತ್ತಿದ್ದರು. ಮುಂಗಾರು ಮಳೆ ಕಾಲದಲ್ಲಿ ಸಜ್ಜೆ, ಜೋಳದಂತಹ ಬೆಳೆ ಬೆಳೆಯುತ್ತಿದ್ದರು. ನಾಲೆ ಕಾಮಗಾರಿಗಳಿಗಾಗಿ ಯಾವುದೇ ಪೂರ್ವಾನುಮತಿ ಇಲ್ಲದೆ ರೈತರ ವಲಯಗಳನ್ನು ಹಗೆದು ಹಾಕಲಾಗಿದೆ. ಈಗ ಯಾವ ಬೆಳೆ ಬೆಳೆಯಲೂ ಆಗುತ್ತಿಲ್ಲ. ರೈತರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಮುರುಗೇಶ್‍ನಿರಾಣಿ ಮಧ್ಯ ಪ್ರವೇಶ ಮಾಡಿ ಆಲಮಟ್ಟಿ ಪುನರ್‍ವಸತಿ ಯೋಜನೆಯಡಿ ಭೂಮಿ ಕಳೆದುಕೊಳ್ಳುವವರಿಗೆ ಪರ್ಯಾಯದ ಮೊತ್ತವನ್ನು ಎಕರೆ 30 ಲಕ್ಷ ನಿಗದಿ ಮಾಡುವಂತೆ ಒತ್ತಾಯಿಸಿದರು.

ಮಾತು ಮುಂದುವರೆಸಿದ ಗೋವಿಂದಕಾರಜೋಳ ಅವರು, ಸಾಧಿಭಾಗ್ಯ ಯೋಜನೆ ಜಾಹೀರಾತಿಗೆ ಮೂರು ಕೋಟಿ ಖರ್ಚು ಮಾಡಿದ್ದಾರೆ. ಯೋಜನೆಗೆ ನೂರಾರು ಮಂದಿ ಅರ್ಜಿ ಹಾಕಿದ್ದಾರೆ. 20-30 ಜನಕ್ಕೆ ಸೌಲಭ್ಯಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಗೆ ಹೆಚ್ಚು ಹಣ ಕೊಡುತ್ತಿರುವುದು ಕೇಂದ್ರ ಸರ್ಕಾರ. ಕೆಜಿಗೆ 29ರೂ. ಖರ್ಚು ಮಾಡಿ ಅಕ್ಕಿ ಖರೀದಿ ಮಾಡಿ ಕೊಡುತ್ತಿದೆ. ಮೂರು ರೂ. ಖರ್ಚು ಮಾಡುತ್ತಿರುವ ಸರ್ಕಾರ ಯೋಜನೆ ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದಾಗ ಇದಕ್ಕೆ ಆಡಳಿತ ಪಕ್ಷದ ತುಕಾರಾಮ್ ಆಕ್ಷೇಪ ವ್ಯಕ್ತಪಡಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅರ್ಧಗಂಟೆಯಲ್ಲೇ ಯೋಜನೆ ಘೋಷಿಸಿದರು. ಆಗ ಕೇಂದ್ರದ ನೆರವು ಸಿಗುತ್ತಿರಲಿಲ್ಲ ಎಂದರು.

ರಾಜ್ಯರದ ಬಳಿ ಹಣ ಇಲ್ಲ. ಬೊಕ್ಕಸ ಖಾಲಿಯಾಗಿದೆ. ಹಾಗಾಗಿ ಅಂಗವಿಕಲರಿಗೆ, ವಿಧವೆಯರಿಗೆ, ದೇವದಾಸಿಯರಿಗೆ, ಕಲಾವಿದರಿಗೆ ಆರು ತಿಂಗಳಿನಿಂದಲೂ ಮಾಸಾಸನ ಬಿಡುಗಡೆಯಾಗಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಇದಕ್ಕೆ ಕ್ಷಮೆ ಕೇಳಬೇಕಿತ್ತು ಎಂದು ಗೋವಿಂದಕಾರಜೋಳ ಹೇಳಿದರು.
ದಲಿತರ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸುವುದನ್ನು ನಿಲ್ಲಿಸಿ. ಶಾಸಕರ ಹಿಂದೆ ಓಡಾಡುವ ನಾಲ್ಕೈದು ಮಂದಿ ಹಿಂಬಾಲಕರಿಗೆ ಕೆಲಸ ಕೊಡಿಸುವ ಸಲುವಾಗಿ ಕಾಂಕ್ರಿಟ್ ರಸ್ತೆ ಮಾಡಲಾಗುತ್ತಿದೆ. ಅದನ್ನು ನಿಲ್ಲಿಸಿ. ಹಾಗೆಯೇ ದಲಿತರಿಗೆ ಕುರಿ, ಕೋಳಿ, ಮೊಟ್ಟೆ ನೀಡುವ ಯೋಜನೆ ಕೈ ಬಿಡಿ. ಬದಲಾಗಿ ಶಿಕ್ಷಣ, ಉದ್ಯೋಗ ನೀಡುವ ಯೋಜನೆಗಳಿಗೆ ಒತ್ತು ಕೊಡಿ. ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ವಿದೇಶದಲ್ಲಿ ಓದುವುದಾದರೆ ಎಷ್ಟೇ ದುಡ್ಡು ಖರ್ಚಾದರು ಪಾವತಿ ಮಾಡಿ. ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆ ಬಳಸಿಕೊಂಡು ಔದ್ಯೋಗಿಕ ತರಬೇತಿಗಳನ್ನು ಹೆಚ್ಚು ಮಾಡಿ. ಉದ್ಯೋಗಗಳನ್ನು ಹೆಚ್ಚಿ ಸೃಷ್ಟಿ ಮಾಡಿ ಎಂದರು.
ಇದಕ್ಕೆ ಮಧ್ಯ ಪ್ರವೇಶಿಸಿದ ಬಿಜೆಪಿ ಅರವಿಂದ ಲಿಂಬಾವಳಿ, ಕೇಂದ್ರದ ಅನುದಾನ ಬಳಸಿಕೊಂಡು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಆದರೆ, ಅನ್ನಭಾಗ್ಯದಂತೆ ಇಲ್ಲಿಯೂ ಹೆಸರು ಬದಲಾವಣೆ ಮಾಡಿ ತಮ್ಮ ಯೋಜನೆಯೆಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ