ಆಟದ ನಿಯಮಗಳ ಉಲ್ಲಂಘಿಸಿರದೆ ನಿಷೇಧ!

ದುಬೈ, ಜು.3 – ಮೈದಾನದಲ್ಲಿ ಚೆಂಡು ವಿರೂಪಗೊಳಿಸುವುದರ ಜತೆಗೆ ಅಶ್ಲೀಲವಾಗಿ ವರ್ತಿಸಿದರೆ ಇಲ್ಲವೆ ವೈಯಕ್ತಿಕ ಟೀಕೆ ಮಾಡಿದರೂ ಕ್ರಿಕೆಟಿಗರು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ.
ಚೆಂಡು ವಿರೂಪಗೊಳಿಸುವುದು, ಅಶ್ಲೀಲ ಪದ ಬಳಕೆ ಹಾಗೂ ವೈಯಕ್ತಿಕ ಟೀಕೆ ಮಾಡಿದರೆ ಮೂರು ಟೆಸ್ಟ್ ಪಂದ್ಯ ಹಾಗೂ 12 ಏಕದಿನ ಪಂದ್ಯಗಳಲ್ಲಿ ಆಡದಂತೆ ನಿಷೇಧಿಸುವ ತೀರ್ಮಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಂದಿದೆ. ಸಭ್ಯ ಕ್ರೀಡೆ ಎಂದೇ ಬಣ್ಣಿಸಲಾಗುತ್ತಿರುವ ಕ್ರಿಕೆಟ್‍ನಲ್ಲಿ ಇತ್ತೀಚೆಗೆ ಅಸಭ್ಯ ವರ್ತನೆಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಡಬ್ಲಿನ್‍ನಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚೆಗೆ ಕೇಪ್‍ಟೌನ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ಸ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬಾನ್‍ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿತ್ತು.
ಮೈದಾನದಲ್ಲಿ ಆಟಗಾರರು ಅಸಭ್ಯವಾಗಿ ವರ್ತಿಸುವುದನ್ನು ತಡೆಹಿಡಿಯಬೇಕು ಎಂಬ ಉದ್ದೇಶದಿಂದ ಮಂಡಳಿ ಸದಸ್ಯರು ಕೈಗೊಂಡ ಈ ತೀರ್ಮಾನಕ್ಕೆ ನಾವೆಲ್ಲರೂ ಸಹಮತ ವ್ಯಕ್ತಪಡಿಸಿದ್ದೇವೆ ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ. ಇದರ ಜತೆಗೆ ಇನ್ನು ಮುಂದೆ ಆಟಗಾರರು ಇಲ್ಲವೆ ಸಿಬ್ಬಂದಿ ಔಟಾಗುವುದು ಇಲ್ಲವೆ ಔಟಾಗಿಲ್ಲ ಎಂಬ ಮನವಿ ಸಲ್ಲಿಸಬೇಕಾದರೂ ಪಂದ್ಯಕ್ಕೂ ಮುನ್ನವೇ ಅಫೀಲು ಶುಲ್ಕ ಪಾವತಿಸುವುದನ್ನು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಆಟಗಾರರು ಸಲ್ಲಿಸುವ ಮನವಿ ಯಶಸ್ವಿಯಾದರೆ ಶುಲ್ಕ ವಾಪಸ್ ಮಾಡಲಾಗುವುದು. ಇಲ್ಲದಿದ್ದರೆ ಹಣ ಮುಟ್ಟುಗೋಲು ಹಾಕಿಕೊಳ್ಳಲು ಐಸಿಸಿ ಮುಂದಾಗಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ