ವಾಷಿಂಗ್ಟನ್, ಜು.3- ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಾರತೀಯ ಮೂಲದ ನ್ಯಾಯಮೂರ್ತಿ ಅಮೂಲ್ ಥಾಪರ್ ನೇಮಕಗೊಳ್ಳುವ ಸಾಧ್ಯತೆಗಳಿವೆ.
ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಕೆನಡಿ ಅವರು ಜು.31ರಂದು ನಿವೃತ್ತಿಯಾಗುತ್ತಿದ್ದು , ಅವರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಕೆನಡಿ ಅವರ ಸ್ಥಾನ ತುಂಬಬಲ್ಲ ಸಾಮಥ್ರ್ಯ ಹೊಂದಿರುವ 25 ನ್ಯಾಯಮೂರ್ತಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು , ಈ ಪಟ್ಟಿಯಲ್ಲಿ 49 ವರ್ಷದ ಥಾಪರ್ ಅವರ ಹೆಸರು ಕಾಣಿಸಿಕೊಂಡಿದೆ.
ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆ ಉಸ್ತುವಾರಿಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ವಹಿಸಿಕೊಂಡಿದ್ದು , ಶಿಫಾರಸುಗೊಂಡಿರುವ 25 ನ್ಯಾಯಮೂರ್ತಿಗಳಲ್ಲಿ ಅಮೂಲ್ ಥಾಪರ್ , ಬ್ರೆಟ್ ಕವನಫ್, ಯಾಮಿ ಕೋನಿ ಬರೆಟ್ ಹಾಗೂ ರೇಮಾಂಡ್ ಕೆತ್ಲೇಜ್ ಅವರ ಹೆಸರುಗಳನ್ನು ಟ್ರಂಪ್ ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ. ನಾನು ಸಂದರ್ಶನ ನಡೆಸಿದ ನಾಲ್ವರು ನ್ಯಾಯಮೂರ್ತಿಗಳು ಅತ್ಯದ್ಭುತ ವ್ಯಕ್ತಿಗಳಾಗಿದ್ದು , ಇವರಲ್ಲಿ ಒಬ್ಬರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವುದನ್ನು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ರಂಪ್ ಬಣ್ಣಿಸಿರುವುದರಿಂದ ಥಾಪರ್ ಅವರು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಆಯ್ಕೆಯಾದರೂ ಅಚ್ಚರಿ ಪಡುವಂತಿಲ್ಲ. ನ್ಯಾಯಮೂರ್ತಿಗಳ ಆಯ್ಕೆಗೆ ನಾಮಪತ್ರ ಸಲ್ಲಿಸುವ ಉಸ್ತುವಾರಿಯನ್ನು ಟ್ರಂಪ್ ಅವರು ಭಾರತೀಯ ಮೂಲದ ರಾಜ್ ಷಾ ಅವರಿಗೆ ವಹಿಸಿರುವುದರಿಂದ ಥಾಪರ್ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ ಥಾಪರ್ ಅವರು 9 ಮಂದಿ ಸದಸ್ಯರನ್ನೊಳಗೊಂಡ ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಪೀಠದ ನ್ಯಾಯಮೂರ್ತಿಯಾಗಿ ನೇಮಕಗೊಂಡರೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಇಂತಹ ಮಹತ್ವದ ಹುದ್ದೆ ಅಲಂಕರಿಸುತ್ತಿರುವುದು ಇದೇ ಮೊದಲು ಎನ್ನುವುದು ಉಲ್ಲೇಖಾರ್ಹ.