ರಾಮ ಜನ್ಮಭೂಮಿಯಲ್ಲಿ ಪೂಜೆಗೆ ಅವಕಾಶ ಅರ್ಜಿ, ನಿರಾಕರಣೆ

ನವದೆಹಲಿ, ಜು.3- ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಡಾ.ಸುಬ್ರಹ್ಮಣ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್‍ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ. ಡಾ.ಸುಬ್ರಹ್ಮಣ್ಯ ಸ್ವಾಮಿ ಅವರು ಅಯೋಧ್ಯೆಯಲ್ಲಿರುವ ರಾಮಮಂದಿರದಲ್ಲಿ ಪೂಜೆ ಸಲ್ಲಿಸುವುದು ಹಿಂದೂಗಳ ಮೂಲಭೂತ ಹಕ್ಕು. ಹೀಗಾಗಿ ನ್ಯಾಯಪೀಠ ಈ ಕೂಡಲೇ ಅರ್ಜಿಯ ವಿಚಾರಣೆ ನಡೆಸಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲು ಆದೇಶ ಕೊಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನಿಮ್ಮ ಅಹವಾಲು ಆಲಿಸಲು ನಾವು ಸಿದ್ಧ. ಆದರೆ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ವಿಚಾರಣೆಯನ್ನು ಮುಂದೂಡಿದೆ. ನಂತರ ಮಾತನಾಡಿದ ಸ್ವಾಮಿಯವರು ಮತ್ತೆ 15 ದಿನಗಳ ನಂತರ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುವಂತೆ ವಾದ ಮಂಡಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ