ಶ್ರೀನಗರ, ಜು.3- ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯ ಮೂವರು ಶಾಸಕರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದು, ಬಿಜೆಪಿ ಜತೆ ಕೈ ಜೋಡಿಸುವ ಸುಳಿವು ನೀಡಿದ್ದಾರೆ.
ಶಾಸಕರಾದ ಇಮ್ರಾನ್ ರಾಜ ಅನ್ಸಾರಿ, ಅಭಿದ್ ಅನ್ಸಾರಿ ಮತ್ತು ಮೊಹಮ್ಮದ್ ಅಬ್ಬಾಸ್ ಅವರುಗಳು ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಹಮ್ಮದ್ ಸಯ್ಯದ್ ವಿರುದ್ಧ ಬಂಡಾಯ ಸಾರಿದ್ದಾರೆ. ಈ ಮೂವರು ಶಾಸಕರು ಪಿಡಿಪಿ, ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದರು. ಇತ್ತೀಚೆಗೆ ಪಿಡಿಪಿಯಲ್ಲಿ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ ಹೆಚ್ಚಾಗುತ್ತಿದೆ. ಪಕ್ಷಕ್ಕೆ ದುಡಿದವರನ್ನು ಮೂಲೆಗುಂಪು ಮಾಡಿ ನಿನ್ನೆ ಮೊನ್ನೆ ಬಂದವರಿಗೆ ಮಣೆಹಾಕಲಾಗುತ್ತಿದೆ. ಇದರಿಂದ ಬೇಸತ್ತು ನಾವು ಪಕ್ಷ ತೊರೆಯಲಿದ್ದೇವೆ ಎಂದು ಹೇಳಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಪಿಡಿಪಿಯ ಮೂರನೇ ಒಂದರಷ್ಟು ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಕಸರತ್ತು ಆರಂಭಿಸಿದೆ. ಪಕ್ಷದ ವಿರುದ್ಧ ಬಂಡಾಯ ಸಾರಿರುವ ಭಿನ್ನಮತೀಯ ಶಾಸಕರ ಜತೆ ರಾಜ್ಯ ಬಿಜೆಪಿ ಉಸ್ತುವಾರಿ ರಾಮ್‍ಮಾದವ್ ಸಂಪರ್ಕದಲ್ಲಿದ್ದಾರೆ.
ಅವರನ್ನು ಪಕ್ಷಕ್ಕೆ ಕರೆತಂದು ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಮೂರನೇ ಒಂದಷ್ಟು ಶಾಸಕರು ಹೊರ ಬಂದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಪಿಡಿಪಿಯ 28 ಶಾಸಕರ ಪೈಕಿ ಕನಿಷ್ಠ 10ರಿಂದ 15 ಶಾಸಕರನ್ನು ಕರೆತಂದರೆ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಬಹುದೆಂದು ಕಮಲಪಡೆಯ ಲೆಕ್ಕಾಚಾರ. ಇತ್ತೀಚೆಗಷ್ಟೆ ಬಿಜೆಪಿ-ಪಿಡಿಪಿ ನಡುವೆ ವೈಮನಸ್ಸು ಮೂಡಿದ್ದರಿಂದ ಮುಖ್ಯಮಂತ್ರಿ ಮೆಹಬೂಬಾ ಅವರಿಗೆ ನೀಡಿದ್ದ ಬೆಂಬಲವನ್ನು ವಾಸಪ್ ಪಡೆದಿತ್ತು. ಪರಿಣಾಮ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ.