ಬೆಂಗಳೂರು: ಮತ್ತಿಕೆರೆ ಗೋಕುಲ ಫ್ಲೈಓವರ್ ಬಳಿ ಅಪರೂಪದ ಬಿಳಿ ನಾಗರಹಾವಿನ (ಅಲ್ಬಿನೋ ಕೋಬ್ರಾ) ಮರಿಯನ್ನು ಬಿಬಿಎಂಪಿ ಸ್ವಯಂಸೇವಕರು ರಕ್ಷಣೆ ಮಾಡಿದ್ದಾರೆ.
ಸ್ವಯಂ ಸೇವಕರಾದ ಶರತ್ ಅವರ ತಂಡದ ಸದಸ್ಯರಾದ ರಾಜೇಶ್ ಅವರು ಎರಡು ದಿನಗಳ ಹಿಂದೆ ಜನಿಸಿದ್ದ ಹಾವನ್ನು ರಕ್ಷಣೆ ಮಾಡಿದ್ದಾರೆ. ‘‘ಭಾರತದ ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ಮಾತ್ರ ಕಾಣಿಸುವ ಹಾವು ರಾಜ್ಯದ ದಾಂಡೇಲಿ ಸೇರಿದಂತೆ ಕೆಲವೇ ಭಾಗಗಳಲ್ಲಿಯೂ ಕಂಡು ಬರುತ್ತದೆ. ಇವುಗಳ ಸಂಖ್ಯೆ ಅತಿ ಅಪರೂಪ,’’ಎಂದು ಅವರು ತಿಳಿಸಿದರು.
ಸೋಮವಾರ ಹಾವಿನ ಇರುವಿಕೆ ಕುರಿತು ಸಾರ್ವಜನಿಕರು ನೀಡಿದ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.
‘‘ಕೆಲವು ಸಾಮಾನ್ಯ ನಾಗರಹಾವಿನ ವಂಶವಾಹಿಯಲ್ಲೇ ಬಿಳಿ ನಾಗರಹಾವಿನ ವಂಶವಾಹಿಗಳಿರುತ್ತವೆ. ಈ ರೀತಿ ವಂಶವಾಹಿ ಹೊಂದಿರುವ ಹಾವುಗಳ ಮಿಲನದಿಂದ ಅಪರೂಪಕ್ಕೆ ಬಿಳಿ ಹಾವುಗಳು ಜನಿಸುತ್ತವೆ. ಹಾವು ಒಮ್ಮೆಗೆ 32 ಮೊಟ್ಟೆಗಳನ್ನು ಇಡಬಲ್ಲದು. ಈ ಪೈಕಿ ಒಂದು ಹಾವು ಈ ರೀತಿ ಹುಟ್ಟಿರಬಹುದು. ಬಿಳಿ ಹಾವನ್ನು ಕೇವಲ ಚರ್ಮ ಬೆಳ್ಳಗಿದೆ ಎಂದ ಮಾತ್ರಕ್ಕೆ ಅಲ್ಬಿನೋ ಕೋಬ್ರಾ ಎನ್ನಲಾಗದು. ಚರ್ಮ ಬೆಳ್ಳಗಿರುವ ಹಾವಿನ ಕಣ್ಣು ಕಪ್ಪಗಿದ್ದರೆ ಅದು ಅಲ್ಬಿನೋ ಕೋಬ್ರಾ ಅಲ್ಲ. ಆದರೆ, ಗೋಕುಲದಲ್ಲಿ ಪತ್ತೆಯಾಗಿರುವ ಬಿಳಿ ನಾಗರಹಾವು ಅಲ್ಬಿನೋ ಕೋಬ್ರಾದಂತೆ ಕೆಂಪು ಕಣ್ಣು ಹೊಂದಿದೆ,’’ಎಂದು ಸ್ವಯಂ ಸೇವಕ ರಾಜೇಶ್ ತಿಳಿಸಿದರು.