ಕಠ್ಮಂಡು: ನೇಪಾಳದ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 290 ಕನ್ನಡಿಗರು ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಜನ ಅಲ್ಲಿನ ಭಾರೀ ಮಳೆಗೆ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
ನೇಪಾಳದ ಸಿಮಿಕೋಟ್ನಲ್ಲಿರುವ ಯಾತ್ರಾರ್ಥಿಗಳು ಮಳೆಯಿಂದ ವಾಹನ ಸಂಪರ್ಕ ಮತ್ತು ಹೆಲಿಕ್ಯಾಪ್ಟರ್ ಸಂಪರ್ಕವೂ ಸಾಧ್ಯವಾಗದೆ ಸ್ಥಳದಲ್ಲೇ ಕಾಯುವಂತಾಗಿದೆ. ಈ ಬಗ್ಗೆ ತುರ್ತು ಕಾರ್ಯಾಚರಣೆ ಕೇಂದ್ರ ಟ್ವೀಟ್ ಮಾಡಿದೆ. ಹವಾಮಾನ ವೈಪರೀತ್ಯದಿಂದಾಗಿ ಸಿಮಿಕೋಟ್ನಲ್ಲಿ ಉಳಿದುಕೊಂಡಿರುವ ಭಾರತೀಯ ಸಂತ್ರಸ್ತ ಯಾತ್ರಾರ್ಥಿಗಳೊಂದಿಗೆ ಕಠ್ಮುಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರ ಭದ್ರತೆ ಹಾಗೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಯಾತ್ರಾರ್ಥಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ನವದೆಹಲಿಯ ಕರ್ನಾಟಕ ಭವನದಲ್ಲಿರುವ ಆಯುಕ್ತರಿಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೈಲಾಸ ಮಾನಸ ಸರೋವರ ಯಾತ್ರೆಯ ನೇಪಾಳ್ಗಂಜ್-ಸಿಮಿಕೋಟ್-ಹಿಲ್ಸಾ ಮಾರ್ಗದ ಪರಿಶೀಲನೆ ನಡೆಸುತ್ತಿದೆ. ಇಂದು ಬೆಳಗ್ಗಿನ ಹವಾಮಾನವನ್ನು ಗಮನಿಸಿದರೆ ವಿಮಾನ ಅಥವಾ ಹೆಲಿಕಾಪ್ಟರ್ಗಳು ಆ ಸ್ಥಳಕ್ಕೆ ಹೋಗುವುದು ದುಸ್ತರವೆನಿಸುತ್ತಿದೆ. ಭಾರತೀಯ ಯಾತ್ರಾರ್ಥಿಗಳಿರುವ ಮೂರು ಭಾಗಗಳ ಸದ್ಯದ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಮಾಹಿತಿ ನೀಡುತ್ತಿದ್ದು, ಸದ್ಯದಲ್ಲೇ ರಕ್ಷಣಾ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.