ಬೆಂಗಳೂರು: ರೈತರ ಸಾಲ ಮನ್ನಾ ಪ್ರಸ್ತಾಪದ ಜತೆಗೆ ಕಾಂಗ್ರೆಸ್ ಅವಧಿಯ ಯೋಜನೆಗಳ ಮುಂದುವರಿಕೆಗೆ ಸಮ್ಮತಿಸಿ, ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ (ಸಿಎಂಪಿ) ಅಂತಿಮ ಸ್ವರೂಪ ನೀಡಲಾಗಿದೆ. ಈ ಮೂಲಕ ‘ಜನಪ್ರಿಯತೆಗೆ ಒತ್ತು; ಅಭಿವೃದ್ಧಿಗೆ ಕುತ್ತು’ ಎಂಬ ಸೂತ್ರಕ್ಕೆ ಹೊಸ ಸರಕಾರ ಕಟ್ಟು ಬಿದ್ದಂತಾಗಿದೆ. ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ಈ ನಿರ್ಧಾರಕ್ಕೆ ಬರಲಾಗಿದೆ.
ಈ ನಡುವೆ ಈ ಸಭೆಗೂ ಮುನ್ನ ಸಿದ್ದರಾಮಯ್ಯ ಅವರು ”ಕೇವಲ ಜೆಡಿಎಸ್ ಕಾರ್ಯಕ್ರಮ ವಿಜ್ರಂಭಿಸಲು ಬಿಡಬೇಡಿ. ಕಾಂಗ್ರೆಸ್ ಯೋಜನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಿ,” ಎಂದು ಸೂಚಿಸಿದ್ದರು ಎನ್ನಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತದಲ್ಲಿ ಭಾಗ್ಯಗಳ ಸರಣಿಗಳನ್ನೇ ಜಾರಿಗೊಳಿಸಲಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಣಾಳಿಕೆಗಳಲ್ಲೂ ಹಲವು ಜನಪ್ರಿಯ ಘೋಷಣೆಗಳಿವೆ. ಇವನ್ನೆಲ್ಲ ಅನುಷ್ಠಾನಗೊಳಿಸುವುದೇ ಮೈತ್ರಿ ಸರಕಾರದ ಆದ್ಯತೆ ಇದ್ದಂತಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದೂ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಮೂಲಸೌಕರ್ಯ ಮತ್ತು ಆದ್ಯತಾ ವಲಯದ ಅನುದಾನಕ್ಕೆ ಕತ್ತರಿ ಬೀಳಲಿದ್ದು, ಅಭಿವೃದ್ಧಿ ಕಾರ್ಯಗಳಿಗೂ ಹೊಡೆತ ಬೀಳುವ ಆತಂಕವಿದೆ.
ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಿಎಂಪಿ ಸಮಿತಿಯ ಅಂತಿಮ ಸುತ್ತಿನ ಸಭೆ ಶುಕ್ರವಾರ ನಡೆಯಿತು. ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆ ಸಮತೋಲನಗೊಳಿಸುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಈ ಸಭೆಯಲ್ಲಿ ಒಪ್ಪಿಗೆ ಕೊಡಲಾಯಿತು. ಸಾಲ ಮನ್ನಾ, ಕಾಂಗ್ರೆಸ್ ಯೋಜನೆಗಳ ಮುಂದುವರಿಕೆ ಮತ್ತು ಇಲಾಖಾವಾರು ವೆಚ್ಚ ಕಡಿತ ಮಾಡುವುದು ಸಿಎಂಪಿ ಪ್ರಮುಖಾಂಶವಾಗಿದೆ.
ನಾಳೆ ಸಮನ್ವಯ ಸಮಿತಿ ಸಭೆ
ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆ ಭಾನುವಾರ (ಜುಲೈ 1) ನಡೆಯಲಿದೆ. ಸಿಎಂಪಿ ಸಮಿತಿ ಸಲ್ಲಿಸಲಿರುವ ಶಿಫಾರಸಿಗೆ ಈ ಸಭೆಯಲ್ಲಿ ಅನುಮೋದನೆ ನೀಡಲಾಗುತ್ತದೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಜಿ. ಪರಮೇಶ್ವರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಮತ್ತು ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಭಾಗಿಯಾಗಲಿದ್ದಾರೆ.