ಹೊಸದಾಗಿ ಸಂಪುಟಕ್ಕೆ ಐವರು ಸಚಿವರು ಸೇರ್ಪಡೆ

 

ಬೆಂಗಳೂರು, ಜೂ.29-ಬಜೆಟ್ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಐವರನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್‍ನಿಂದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಸಿ.ಎಸ್.ಶಿವಳ್ಳಿ, ತುಕಾರಾಂ, ಬಿ.ಕೆ.ಸಂಗಮೇಶ್ ಅಥವಾ ಬಿ.ಸಿ.ಪಾಟೀಲ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಜುಲೈ 1ರಂದು ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ಕಳೆದ 20 ದಿನಗಳಿಂದಲೂ ಒತ್ತಡ ಕೇಳಿಬಂದಿತ್ತು. ಹಲವರು ಬಹಿರಂಗವಾಗಿ ಬಂಡಾಯ ಸಾರಿದ್ದರು. ಹೈಕಮಾಂಡ್ ಅವರೆಲ್ಲರನ್ನೂ ಮನವೊಲಿಸಿ ಎರಡನೆ ಹಂತದ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಕೊಡಿಸುವ ಭರವಸೆ ನೀಡಿತ್ತು. ಅಲ್ಲದೆ, ಉತ್ತರ ಕರ್ನಾಟಕ ಭಾಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ಉತ್ತರ ಕರ್ನಾಟಕದ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ಹಿರಿಯರಿಗೆ ಆದ್ಯತೆ, ಜಾತಿವಾರು ಪ್ರಾತಿನಿಧ್ಯತೆ, ಪ್ರಾದೇಶಿಕವಾರು ಮಾನ್ಯತೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಾಗುತ್ತಿದೆ. ಹಿರಿಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ನಿರ್ಧಾರದಲ್ಲಿ ಎಚ್.ಕೆ.ಪಾಟೀಲ್ ಮತ್ತು ರಾಮಲಿಂಗಾರೆಡ್ಡಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಎಚ್.ಕೆ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾದಂತಿದೆ. ಲಿಂಗಾಯತರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಹಿನ್ನೆಲೆಯಲ್ಲಿ ಸಂಗಮೇಶ್, ಬಿ.ಸಿ.ಪಾಟೀಲ್, ಎಂ.ಬಿ.ಪಾಟೀಲ್ ಈ ಮೂವರಲ್ಲಿ ಇಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಅದೇ ರೀತಿ ಹಿಂದುಳಿದ ಸಮುದಾಯದಲ್ಲಿ ಸಿ.ಎಸ್.ಶಿವಳ್ಳಿ ಹಾಗೂ ಎಸ್‍ಟಿ ಸಮುದಾಯದಿಂದ ತುಕಾರಾಂ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 1ರಂದು ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಈ ಸಂಬಂಧ ನಾಳೆ ರಾಜ್ಯಕ್ಕೆ ಆಗಮಿಸಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಹಿರಿಯ ಮುಖಂಡರಾದ ಖರ್ಗೆ ಅವರು ಕೂಡ ಇಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದ್ದು, ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‍ನಿಂದ ಮುಖ್ಯಮಂತ್ರಿಯವರಿಗೆ ಹೆಸರುಗಳನ್ನು ಕಳುಹಿಸಿಕೊಟ್ಟರೆ ಒಂದು ದಿನದಲ್ಲಿ ಈ ಪ್ರಕ್ರಿಯೆ ನಡೆದು ಹೋಗುತ್ತದೆ. ಬಜೆಟ್ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜುಲೈ 2ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಜುಲೈ 1ರಂದು ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಬಜೆಟ್ ಅಧಿವೇಶನದ ನಂತರ ನಿಗಮ-ಮಂಡಳಿಗಳು ಅಧ್ಯಕ್ಷರ ನೇಮಕ ಮಾಡಲು ಮೈತ್ರಿ ಸರ್ಕಾರ ನಿರ್ಧರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ