ಬೆಂಗಳೂರು, ಜೂ.29- ಬಜೆಟ್ನಲ್ಲಿ ನಮ್ಮ ಪಕ್ಷದ ಪ್ರಮುಖ ಯೋಜನೆಗಳು ಜಾರಿಯಾಗಲೇಬೇಕು. ಇಲ್ಲವಾದರೆ ಲೋಕಸಭೆ ಚುನಾವಣೆ ವೇಳೆ ಕಷ್ಟವಾಗುತ್ತದೆ. ನಮ್ಮ ಜನಪ್ರಿಯ ಯೋಜನೆಗಳನ್ನು ನಿರಾಕರಿಸದಂತೆ ನೋಡಿಕೊಳ್ಳಬೇಕೆಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಸಮಿತಿಯ ಮೇಲೆ ಒತ್ತಡ ತಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕನಿಷ್ಠ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವರಾದ ದೇಶಪಾಂಡೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಮುಂತಾದವರು ಮಾತನಾಡಿ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುತ್ತಿವೆ. ನಾವು ಪಕ್ಷವನ್ನು ಬಲಪಡಿಸಬೇಕಿದೆ. ಎಲ್ಲ ಯೋಜನೆಗಳೂ ಜಾರಿಯಾಗಬೇಕು. ಆಗ ಮಾತ್ರ ನಾವು ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯ ಎಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾದ ಮೊಯ್ಲಿ ಅವರ ಮೇಲೆ ಒತ್ತಡ ತರಲಾಯಿತು.
ಸಮಿತಿಯಲ್ಲಿರುವ ಜೆಡಿಎಸ್ ಮುಖಂಡರು ನಮ್ಮ ಜನಪ್ರಿಯ ಯೋಜನೆಗಳನ್ನು ನಿರಾಕರಿಸಬಹುದು. ಏಕೆಂದರೆ, ಅವರ ಪಕ್ಷ ಬಲಪಡಿಸಲು ಚಿಂತಿಸಿದ್ದಾರೆ. ನಮ್ಮ ಯೋಜನೆಗಳಿಗೆ ಎಲ್ಲಿ ಕ್ರೆಡಿಟ್ ಬರುತ್ತೋ ಅಂತ ಕೆಲಸಕ್ಕೆ ಬ್ರೇಕ್ ಹಾಕಬಹುದು. ಯಾವುದೇ ಕಾರಣಕ್ಕೂ ಸಭೆಯಲ್ಲಿ ಅದಕ್ಕೆ ಒಪ್ಪಿಕೊಳ್ಳಬೇಡಿ. ಪಟ್ಟು ಹಿಡಿದು ವರದಿಯನ್ನು ಸಮಿತಿಗೆ ಕಳುಹಿಸಿ. ಮುಂದಿನ ನಡೆ ನಾವು ನೋಡಿಕೊಳ್ಳುತ್ತೇವೆ ಎಂದು ಮೂವರು ಸಮಿತಿ ಸದಸ್ಯರಿಗೆ ಸಿದ್ದರಾಮಯ್ಯ ಸಲಹೆ ಮಾಡಿದರು.
ಸಿದ್ದು ಅವರ ಮಾತಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕೂಡ ಸಭೆಯಲ್ಲಿ ದನಿಗೂಡಿಸಿದ್ದಾರೆ.