ಬೆಂಗಳೂರು, ಜೂ.26-ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ)ಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.
ಕಳೆದ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ನರೇಗಾ ನಿಯಮ ಮತ್ತು ಮಾರ್ಗಸೂಚಿಯನ್ನು ಉಲ್ಲಂಘಿಸಿದ 596 ಪ್ರಕರಣಗಳು ವರದಿಯಾಗಿವೆ. ಇದೇ ವರ್ಷ 1,97,368 ಕೆಲಸಗಳು ನರೇಗಾ ಯೋಜನೆಯಡಿ ಮುಗಿದಿದ್ದು 8,42,344 ಕೆಲಸಗಳು ಮುಕ್ತಾಯದ ಹಂತದಲ್ಲಿವೆ. ಅನೇಕ ಗುತ್ತಿಗೆದಾರರು ಮತ್ತು ಸರ್ಕಾರೇತರ ಅಧಿಕಾರಿಗಳು ಸೇರಿದಂತೆ 85 ವೈಯಕ್ತಿಕ ಕೇಸುಗಳು ದಾಖಲಾಗಿವೆ.
306 ಮಂದಿ ಸರ್ಕಾರಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 643 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿನ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಪೂರ್ಣಗೊಂಡಿರುವ ಅಥವಾ ಪ್ರಗತಿಯಲ್ಲಿರುವ ಕೆಲಸಗಳನ್ನು ತಪಾಸಣೆ ಮಾಡಿದಾಗ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ಉಲ್ಲಂಘನೆ, ಒಬ್ಬ ಕಾರ್ಮಿಕನಿಗೇ ಎರಡು ಬಾರಿ ವೇತನ ಪಾವತಿ, ನರೇಗಾ ಕಾರ್ಡು ಹೊಂದಿಲ್ಲದವರಿಗೆ ಪಾವತಿ, ಕೆಲಸದ ಅಳತೆಯಲ್ಲಿ ವೈವಿಧ್ಯತೆ, ಕಳಪೆ ಗುಣಮಟ್ಟದ ವಸ್ತು ಬಳಕೆ, ಹೆಚ್ಚಿನ ಬಿಲ್ಲು ಅಂದಾಜು ಮತ್ತು ಅಪ್ರಾಪ್ತರಿಗೆ ಕೂಲಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎನ್ನುತ್ತಾರೆ.
ನರೇಗಾ ಯೋಜನೆಯಡಿ ಬಹುತೇಕ ಕೆಲಸದ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು ಕೆಲವೊಂದನ್ನು ರಾಜ್ಯ ಸರ್ಕಾರ ರಚಿಸುತ್ತದೆ ಎನ್ನುತ್ತಾರೆ ನರೇಗಾ ಯೋಜನೆಯ ಜಂಟಿ ನಿರ್ದೇಶಕ ವಿ ಎಂ ಮಹೇಶ್.ನರೇಗಾ ಯೋಜನೆಯ ನಿಯಮ ಮತ್ತು ಮಾರ್ಗಸೂಚಿ ಪ್ರಕಾರ ಕೆಲಸ ಆಗಬೇಕಾಗಿದ್ದು ಅದನ್ನು ಉಲ್ಲಂಘಿಸಿದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ದ ದೂರು ದಾಖಲಿಸಲಾಗಿತ್ತದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳುತ್ತದೆ.
ಕರ್ನಾಟಕದಲ್ಲಿ ನರೇಗಾ ಯೋಜನೆಯಡಿ ಪ್ರತಿ ಜಿಲ್ಲೆಗೆ ತನಿಖಾಧಿಕಾರಿ ಇರುತ್ತಾರೆ. ಅವರು ಕಾರ್ಡು ಹೊಂದಿರುವವರು, ಸಾರ್ವಜನಿಕರು ಮತ್ತು ಸಂಘಟನೆಗಳಿಂದ ದೂರು ಸ್ವೀಕರಿಸುತ್ತಾರೆ. ತನಿಖಾಧಿಕಾರಿಗಳು ಸಾಮಾನ್ಯವಾಗಿ ನಿವೃತ್ತ ಅಧಿಕಾರಿಗಳಾಗಿದ್ದು ಗ್ರಾಮೀಣ ವಲಯಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ. ಅವರು ತನಿಖೆಗಳನ್ನು ಕೂಡ ನಡೆಸುತ್ತಾರೆ. ನರೇಗಾ ಯೋಜನೆ ಉಲ್ಲಂಘನೆಯಾಗಿರುವುದು ಕಂಡುಬಂದರೆ ಇಲಾಖಾ ಮಟ್ಟz ತನಿಖೆಗೆ ಶಿಫಾರಸು ಮಾಡುತ್ತಾರೆ ಇಲ್ಲವೇ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ನಷ್ಟವನ್ನು ಭರಿಸಲು ಹೇಳುತ್ತಾರೆ.