ಬೆಂಗಳೂರು, ಜೂ.26- ಬಜೆಟ್ ಮಂಡನೆಯಲ್ಲಿ ಯಾವುದೇ ಗೊಂದಲಗಳಿಲ್ಲ ಜು.5ರಂದು ನಡೆಯುವ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಜೆಟ್ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವ ಮುನ್ನ ಶಕ್ತಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಬಜೆಟನ್ನು ಮಂಡನೆ ಮಾಡಿಯೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಿನ್ನೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಅವರು, ಬಜೆಟ್ ಮಂಡನೆ ಬೇಕೇ ಅಥವಾ ಬೇಡವೇ ಎಂಬ ಗೊಂದಲ ಇದೆ. ಮಾಡದೇ ಇದ್ದರೆ ಹೊಸದಾಗಿ ಆಯ್ಕೆಯಾಗಿರುವ 100 ಶಾಸಕರ ಹಕ್ಕು ಚ್ಯುತಿಯಾಗುತ್ತದೆ. ಈ ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್ಗೆ ಅಂಗೀಕಾರ ನೀಡಿದ್ದಶಾಸಕರ ಪೈಕಿ ನೂರು ಮಂದಿ ಸೋಲು ಕಂಡಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ಜೂ.22ರಿಂದ ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸಿರುವ ಕುಮಾರಸ್ವಾಮಿ ಅವರು ಇಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಸಣ್ಣ ಕೈಗಾರಿಕೆ, ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೌರಾಡಳಿತ ಇಲಾಖೆ, ಬಂದರು, ಒಳನಾಡು ಜಲಸಾರಿಗೆ, ವಸತಿ ಇಲಾಖೆ, ಬಿಬಿಎಂಪಿ ಹೊರತು ಪಡಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಮುಖ್ಯಸ್ಥರ ಜತೆ ನಿರಂತರವಾಗಿ ಸಭೆಗಳನ್ನು ನಡೆಸಿದರು.
ಜೂ.28ರವರೆಗೂ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದ್ದು, ಜು.5ರಂದು ಬಜೆಟ್ ಮಂಡನೆಯಾಗಲಿದೆ. ಈ ನಡುವೆ ಎದ್ದಿದ್ದ ಎಲ್ಲಾ ಗೊಂದಲಗಳಿಗೂ ಕುಮಾರಸ್ವಾಮಿ ತೆರೆ ಎಳೆದರು.