ಬೆಂಗಳೂರು, ಜೂ.24-ಹಿಂದೂಗಳೇ ಉಗ್ರವಾದ ಮಾಡುತ್ತಾರೆ. ಮುಸ್ಲಿಮರಲ್ಲ ಎಂದು ದೇಶದ್ರೋಹದ ಹೇಳಿಕೆ ನೀಡಿರುವ ಕಾಂಗ್ರೆಸ್ ಗುಲಾಮ್‍ನಬಿ ಆಜಾದ್ ಅವರೊಂದಿಗೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರಿಗೆ ಉತ್ತರ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬಿತ್‍ಪಾತ್ರ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಶಾಮ್‍ಪ್ರಕಾಶ್ ಮುಖರ್ಜಿ ಅವರ 65ನೆ ಸಂಸ್ಮರಣಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಗುಲಾಮ್ ನಬಿ ಆಜಾದ್ ದೇಶದಲ್ಲಿ ಉಗ್ರವಾದವನ್ನು ಹಿಂದೂಗಳೆ ಮಾಡುತ್ತಿದ್ದಾರೆ. ಮುಸ್ಲಿಮರಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಲಷ್ಕರ್-ಇ-ತೊಯ್ಬಾ ಸಹ ಸಹಮತ ವ್ಯಕ್ತಪಡಿಸಿತ್ತು. ಹಾಗಾಗಿ ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿದೆ. ಉಗ್ರವಾದದ ಹೇಳಿಕೆ ಹಾಗೂ ಲಷ್ಕರ್-ಇ-ತೊಯ್ಬಾದಂತಹ ಸಂಘಟನೆಯನ್ನು ಒಪ್ಪಿಕೊಳ್ಳುತ್ತೀರಾ, ಹಾಗಿದ್ದರೆ ಅದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ಪಾಕ್‍ನಲ್ಲೂ ಈ ಬಗ್ಗೆ ಚರ್ಚೆಯಾಗಿದ್ದಲ್ಲದೆ ವಿಶ್ವವ್ಯಾಪಿ ಚರ್ಚೆ ನಡೆದಿರುವ ಇಂತಹ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಅವರ ನಿಲುವೇನು? ಅಂತಹವರ ಜತೆ ಸ್ನೇಹ ಚಾಚಿರುವ ಬಗ್ಗೆ ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಮೊದಲು ಜೆಡಿಎಸ್‍ನ ಕುಮಾರಸ್ವಾಮಿ ಹಾಗೂ ದೇವೇಗೌಡರು ಕಾಂಗ್ರೆಸ್ ನೀಚ ಪಕ್ಷ ಎಂದು ಜರಿದಿದ್ದರು. ಆದರೆ, ಫಲಿತಾಂಶದ ವೇಳೆ ಬಿಜೆಪಿ 104 ಸ್ಥಾನ ಗಳಿಸುತ್ತಿದ್ದಂತೆಯೇ ಏಕಾಏಕಿ ಇವರಲ್ಲಿ ಜಾತ್ಯತೀತ ನಿಲುವು ವ್ಯಕ್ತವಾಯಿತು. ಅಲ್ಲಿಯವರೆಗೆ ಅವರಿಗೆ ಜಾತ್ಯತೀತೆಯ ನೆನಪಾಗಿರಲಿಲ್ಲವೆ ಎಂದು ಲೇವಡಿ ಮಾಡಿದರು.
ಪ್ರಸ್ತುತ ರಾಜ್ಯದಲ್ಲಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದಿಂದ ಕಾಂಗ್ರೆಸ್ ಸಂತೋಷವಾಗಿಲ್ಲ. ಕುಮಾರಸ್ವಾಮಿ, ದೇವೇಗೌಡರು ಸಹ ಸಂತೋಷವಾಗಿಲ್ಲ. ಇದರೊಂದಿಗೆ ರಾಜ್ಯದ ಜನರೂ ಸಹ ಖುಷಿಯಿಂದಿಲ್ಲ. ಇದೊಂದು ಅಪವಿತ್ರ ಮೈತ್ರಿ ಎಂಬುದು ಎಲ್ಲರಿಗೂ ತಿಳಿದಿದೆ. ಕುಮಾರಸ್ವಾಮಿಯವರು 2019ರ ಚುನಾವಣೆವರೆಗೂ ಯಾರೂ ನನ್ನನ್ನು ಮುಟ್ಟಲು ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಐದು ವರ್ಷಗಳ ಆಡಳಿತಕ್ಕಾಗಿ ಜನ ತಮಗೆ ವೋಟು ನೀಡಿದ್ದಾರೆ ಎಂಬುದನ್ನು ಏಕೆ ಮರೆತಿದ್ದಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ನಿಮ್ಮಲ್ಲೇ ಭಯ-ಆತಂಕ ಇದೆ ಎಂದು ಹೇಳಿದರು.
2010ರಲ್ಲಿ ಕೇಂದ್ರ ಸಚಿವರಾಗಿದ್ದ ಚಿದಂಬರಂ ಅವರು ಕೇಸರಿ ಭಯೋತ್ಪಾದನೆ ಎಂದು ಹೇಳಿದ್ದರು. ಎಐಸಿಸಿ ಮುಖಂಡ ದಿಗ್ವಿಜಯ್‍ಸಿಂಗ್ ಅದೇ ರೀತಿಯ ಹೇಳಿಕೆ ನೀಡಿದ್ದರು. ಇದರೊಂದಿಗೆ ಸಯಾವುದ್ದೀನ್ ಅವರು ಸಹ ಉಗ್ರವಾದದ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್‍ನವರೇ ದೇಶದ್ರೋಹದ ಹೇಳಿಕೆ ನೀಡುತ್ತಿದ್ದಾರೆ. ಕೇಸರಿ ಭಯೋತ್ಪಾದನೆಯನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್‍ಗಾಂಧಿ ಅವರು ವಿಧಾನಸಭೆ ಚುನಾವಣೆ ವೇಳೆ ದೇವಸ್ಥಾನ ಸುತ್ತಿದ್ದು ಯಾಕೆ? ಅಂದರೆ ಅವರಿಗೆ ರಾಷ್ಟ್ರೀಯತೆಗಿಂತ ಚುನಾವಣೆ ಮುಖ್ಯವೆ? ರಾಷ್ಟ್ರೀಯತೆಯನ್ನು ಬೆಂಬಲಿಸಲು ಕಾಂಗ್ರೆಸ್ ಸಿದ್ಧವಿಲ್ಲವೆ ಎಂದು ಹರಿಹಾಯ್ದರು.
1970ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಇಬ್ಬರು ಕಾಂಗ್ರೆಸಿಗರನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದರು. ಇದನ್ನು ಕಂಡ ಹತ್ಯೆಯಾದವರ ತಾಯಿ ಆಘಾತಕ್ಕೊಳಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಇದು ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅದೇ ಕಾಂಗ್ರೆಸಿಗರು ಕಮ್ಯುನಿಸ್ಟರೊಂದಿಗೆ ಕೈ ಜೋಡಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ 370ನೆ ವಿಧಿ ರದ್ದತಿ ಕುರಿತಂತೆ ಬಿಜೆಪಿಯ ನಿಲುವು ಬದಲಾಗಿಲ್ಲ. ದೇಶದ ಜನರಲ್ಲಿ ತಾರತಮ್ಯ ಮಾಡುವುದು ನಮ್ಮ ಉದ್ದೇಶವಲ್ಲ. ನಾವು ಎಂದಿಗೂ ಲಡಾಖ್ ಮತ್ತು ಜಮ್ಮು-ಕಾಶ್ಮೀರದವರ ಪರವಾಗಿಯೇ ಇದ್ದೇವೆ. ಆದರೆ, ಬಿಜೆಪಿಯನ್ನು ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸುತ್ತ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಕೇರಳದಲ್ಲಿ 35 ಮಂದಿ ಕ್ರಿಶ್ಚಿಯನ್ ದಾದಿಯರ ಪೈಕಿ ಇಬ್ಬರು ಪಾದ್ರಿಯರು ಉಗ್ರರ ಕೈಗೆ ಸಿಲುಕಿದ್ದಾಗ ಅವರನ್ನು ಸುರಕ್ಷಿತವಾಗಿ ಕರೆತರಲು ಮೋದಿ ಅವರು ತೆಗೆದುಕೊಂಡ ಕಾಳಜಿ ಇಡೀ ದೇಶದ ಎಲ್ಲ ಸಮುದಾಯಗಳಿಗೂ ಗೊತ್ತಿದೆ. ಆದರೂ ಬಿಜೆಪಿಯನ್ನು ಅಲ್ಪಸಂಖ್ಯಾತರ ವಿರೋಧಿ ಎನ್ನುತ್ತಿದ್ದಾರೆ ಎಂದರು.
ಮುಸ್ಲಿಮರಲ್ಲಿದ್ದ ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಬಗ್ಗೆ ಮಾತನಾಡಲು ಹೆದರುತ್ತಿಲ್ಲ. ಮುಸ್ಲಿಂ ಸಹೋದರಿಯರ ಹಕ್ಕುಗಳ ರಕ್ಷಣೆಗಾಗಿ ಮೋದಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು ಎಂದು ಹೇಳಿದರು.
ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಉಪಾಧ್ಯಕ್ಷ ಡಾ.ವಿನಯ್, ಡಾ.ಅನ್ರಿಬನ್ ಗಂಗೂಲಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.