ಬೆಂಗಳೂರು, ಜೂ.24- ಸರ್ಕಾರ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಸಿದ್ಧವಾಗಿದ್ದು, ಸ್ಪರ್ಧಾತ್ಮಕ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾಲೇಜು ಪ್ರಾಂಶುಪಾಲರು ಹಾಗೂ ಶಿಕ್ಷಕರು ಕಾಳಜಿ ವಹಿಸಬೇಕು. ಅದನ್ನು ಬಿಟ್ಟು ರಾಜಕಾರಣಿಗಳ ಮೇಲೆ ಚೇಲಾಗಿರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಾಕೀತು ಮಾಡಿದರು.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಅಖಿಲ ಭಾರತ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಪದವಿ ಕಾಲೇಜುಗಳಿಗೆ ಉನ್ನತ ಶಿಕ್ಷಣ ಲಭ್ಯವಾಗುವಂತೆ ಎಲ್ಲ ರೀತಿಯ ಸೌಲಭ್ಯ ಕೊಡಲು ಸರ್ಕಾರ ಸಿದ್ಧವಿದೆ. ಆದರೆ, ಅದಕ್ಕೆ ತಕ್ಕ ರೀತಿಯಲ್ಲಿ ಸುಧಾರಣೆಯಾಗಬೇಕಿದೆ. ಇದರಲ್ಲಿ ಶಿಕ್ಷಕರು ಹಾಗೂ ಪ್ರಾಂಶುಪಾಲರ ಪಾತ್ರ ಮಹತ್ವವಾದದ್ದು. ಅದನ್ನು ಮನಗಂಡು ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಇಂದಿನ ಶಿಕ್ಷಕರು, ಪ್ರಾಂಶುಪಾಲರು ತಮ್ಮ ವೃತ್ತಿಯನ್ನು ಬಿಟ್ಟು ರಾಜಕಾರಣಿಗಳು, ಜನಪ್ರತಿನಿಧಿಗಳ ಹಿಂದೆ ತಿರುಗಾಡುತ್ತಿದ್ದಾರೆ. ಇಂತಹ ಕೆಲಸವನ್ನು ಮೊದಲು ನಿಲ್ಲಿಸಬೇಕು ಎಂದರು.
ರಾಜ್ಯದ ಪದವಿ ಕಾಲೇಜಿನ ಉಪನ್ಯಾಸಕರ ವರ್ಗಾವಣೆಗೆ ಅಗತ್ಯವಾಗಿರುವ ನೀತಿಯನ್ನು ಶೀಘ್ರ ಜಾರಿಗೆ ತರಲಿದ್ದೇವೆ. ಈ ರೀತಿ ಅಧ್ಯಾಪಕರ ಸ್ನೇಹಿಯಾಗಿರುತ್ತದೆ ಎಂದು ಹೇಳಿದರು.
ಖಾಸಗಿ ಹಾಗೂ ಸರ್ಕಾರಿ ಕಾಲೇಜಿನ ಅಧ್ಯಾಪಕರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸರ್ಕಾರಿ ಕಾಲೇಜಿನಲ್ಲಿ ವೇತನಕ್ಕೆ ತಕ್ಕಂತೆ ತಾವು ಕೆಲಸ ನಿರ್ವಹಿಸುತ್ತಿದ್ದೇವೆಯೇ ಎಂಬುದನ್ನು ಅಧ್ಯಾಪಕರು ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಸರ್ಕಾರಿ ಕಾಲೇಜುಗಳ ಅಧ್ಯಾಪಕರಿಗೆ ಖಾಸಗಿ ಕಾಲೇಜಿನ ಮಾದರಿಯಲ್ಲೇ ವೇತನ ಸೌಲಭ್ಯ ನೀಡಿದ್ದರೂ ಖಾಸಗಿ ಕಾಲೇಜುಗಳಲ್ಲಿನ ಶಿಸ್ತು, ಪರಿಣಾಮಕಾರಿ ಬೋಧನೆ ಮಾತ್ರ ಸಾಧ್ಯವಾಗುತ್ತಿಲ್ಲ. ಇನ್ನು ವಿಶ್ವವಿದ್ಯಾನಿಲಯಗಳಲ್ಲಿ ಬ್ರಿಟಿಷ್ ವ್ಯವಸ್ಥೆಯೇ ಇದೆ. ಗ್ರಾಮೀಣ ಭಾಗದಲ್ಲೂ ಉತ್ತಮ ಶಿಕ್ಷಣ ಕೊಡುವ ವ್ಯವಸ್ಥೆಯಾಗಬೇಕಿದೆ. ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದರ ಮೇಲೆ ಇಂದಿಗೂ ಜನಕ್ಕೆ ನಂಬಿಕೆ ಇದೆ. ಆ ನಂಬಿಕೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಿ. ಅದನ್ನು ಉಳಿಸಿಕೊಳ್ಳಿ ಎಂದು ಹೇಳಿದ ಅವರು, 2016ರ ಯುಜಿಸಿ ವೇತನ ಕಾಲೇಜು ಅಧ್ಯಾಪಕರಿಗೆ ಸರಿಯಾದ ರೀತಿಯಲ್ಲಿ ಪರಿಷ್ಕರಣೆಯಾಗಿಲ್ಲ ಎಂಬ ಬೇಡಿಕೆ ಇದೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಖಾಲಿ ಇರುವ 400 ಕಾಲೇಜುಗಳ ಪ್ರಾಂಶುಪಾಲರ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಖಾಲಿ ಇರುವ ಅಧ್ಯಾಪಕರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತೇವೆ. ಎಲ್ಲ ರೀತಿಯ ಸೌಲಭ್ಯ ಕೊಡಲು ಸರ್ಕಾರ ಬದ್ಧವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಕಾಪಾಡಬೇಕು ಎಂದು ಹೇಳಿದರು.
ಸರ್ಕಾರಿ ಕಾಲೇಜಿನ ಶಿಕ್ಷಣವೇ ನಂಬರ್ ಒನ್ ಆಗಬೇಕು. ಖಾಸಗಿ ಕಾಲೇಜಿನೊಂದಿಗೆ ಸ್ಪರ್ಧಾತ್ಮಕವಾಗಿ ಬೆಳೆಯುವ ಕೆಲಸವಾಗಬೇಕು. ಈ ಹಿಂದೆ ಶಿಕ್ಷಕರು ಬರುತ್ತಾರೆಂದರೆ ಅಷ್ಟು ಗೌರವ ಕೊಡುತ್ತಿದ್ದರು. ಆ ಸ್ಥಿತಿ ಈಗ ಇದೆಯೇ ಎಂಬುದನ್ನು ಮನವರಿಕೆ ಮಾಡಿಕೊಂಡು ಮುನ್ನಡೆಯಬೇಕು. ಏಕೆ ಹೀಗಾಗಿದೆ ಎಂಬುದನ್ನು ಅರಿತು ನಡೆಯಿರಿ ಎಂದು ಸಲಹೆ ಮಾಡಿದರು.
ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣದ ಅವಶ್ಯಕತೆ ಇದೆ. ಅವರಿಗೂ ಸೂಕ್ತ ಸ್ಥಾನಮಾನ ಹಾಗೂ ಆದ್ಯತೆ ದೊರೆಯಬೇಕಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಆಯುಕ್ತರಾದ ಡಾ.ಎನ್.ಮಂಜುಳಾ, ಎಐಎಫ್ಯು ಸಿಟಿಒ ಮುಖ್ಯ ಕಾರ್ಯದರ್ಶಿ ಪೆÇ್ರ.ಅರುಣ್ಕುಮಾರ್, ಅಧ್ಯಕ್ಷ ಕೇಶಬ್ ಭಟ್ಟಾಚಾರ್ಯ, ಕೆಜಿಸಿಟಿಎ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್, ಡಾ.ಬಿ.ಜಿ.ಭಾಸ್ಕರ ಮತ್ತಿತರರು ಉಪಸ್ಥಿತರಿದ್ದರು.