ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿದ್ದರಾಮಯ್ಯ ರಹಸ್ಯ ರಾಜಕೀಯ ಸಭೆ

 

ಬೆಂಗಳೂರು, ಜೂ.24- ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಹಸ್ಯ ರಾಜಕೀಯ ಸಭೆ ನಡೆಸಿದ್ದಾರೆ.
ಕಾಂಗ್ರೆಸ್‍ನ ಹಲವು ನಾಯಕರು ಸಿದ್ದರಾಮಯ್ಯನವರೊಂದಿಗೆ ಬಜೆಟ್ ಘೋಷಣೆ, ಸಾಲಮನ್ನಾ ವಿಷಯದ ಬಗ್ಗೆ ಚರ್ಚೆ ನಡೆಸಿದ್ದು, ಸಿದ್ದರಾಮಯ್ಯನವರು ತಮ್ಮ ಅಸಮಧಾನ ಹೊರ ಹಾಕಿರುವುದು ಬಹಿರಂಗವಾಗಿದೆ.
ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಶಾಸಕರಾದ ಬೈರತಿ ಬಸವರಾಜು, ಮುನಿರತ್ನ ಮುಂತಾದವರು ಮಾತುಕತೆ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನೂತನ ಬಜೆಟ್ ಮಂಡನೆಗೆ ಮುಂದಾಗಿರುವುದಕ್ಕೆ ಸಿದ್ದರಾಮಯ್ಯ ಅಸಮಧಾನ ಹೊರ ಹಾಕಿದ್ದಾರೆ.
ಪೂರ್ಣ ಬಜೆಟ್ ಬೇಡ, ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಹೇಳಿದ್ದರು. ಕುಮಾರಸ್ವಾಮಿ ಅವರು ಪೂರ್ಣ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರೇ ಬೆಂಬಲವಾಗಿ ನಿಂತಿದ್ದಾರೆ. ಹೀಗಾದರೆ ಕಾಂಗ್ರೆಸ್ ಪಕ್ಷದ ಬಲ ಏನಾಗುತ್ತದೆ ? ನಮ್ಮ ಈ ಹಿಂದಿನ ಸರ್ಕಾರ ಮಂಡಿಸಿದ ಬಜೆಟ್ ಬದಲು ಹೊಸ ಬಜೆಟ್ ಮಂಡಿಸುವುದು ಎಷ್ಟು ಸಮಂಜಸ ಎಂದು ಶಾಸಕರ ಬಳಿ ಸಿದ್ದರಾಮಯ್ಯ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ.
ಹೊಸ ಬಜೆಟ್ ಬೇಡ ಎಂದ ತಕ್ಷಣ ವಿರೋಧ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಅವರಿಂದ ಒಪ್ಪಿಗೆ ಪಡೆದಿರುವುದು ಸಿದ್ದರಾಮಯ್ಯನವರ ಅಸಮಧಾನಕ್ಕೆ ಕಾರಣವಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷರೇ ಜೆಡಿಎಸ್ ನಾಯಕರ ಎಲ್ಲಾ ಮಾತುಗಳನ್ನು ಕೇಳುತ್ತಿದ್ದಾರೆ. ಈಗ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರಗಳನ್ನು ಕೈಗೊಳ್ಳೋಣ ಎಂದು ಹೇಳಿದರು ಎನ್ನಲಾಗಿದೆ.
ಒಣಭೂಮಿಗೆ ಎಕರೆಗೆ 10 ಸಾವಿರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿತ್ತು. ರೈತರ ಪರವಾಗಿ ಹಲವು ಉತ್ತಮ ಯೋಜನೆಗಳನ್ನು ರೂಪಿಸಿದ್ದೆವು. ಮತ್ತೆ ಸಾಲ ಮನ್ನಾವಾಗುತ್ತದೆ ಎಂದು ಸಾಕಷ್ಟು ರೈತರು ಸಾಲ ಮರುಪಾವತಿ ಮಾಡುತ್ತಿಲ್ಲ. ಸಾಲ ಮನ್ನಾ ವಿಷಯದಲ್ಲೂ ಕೂಡ ಏಕಪಕ್ಷೀಯ ನಿರ್ಧಾರಗಳನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪುಗೊಳ್ಳುವ ಮುನ್ನವೇ ಬಜೆಟ್ ತಯಾರಿ ನಡೆದಿದೆ ಎಂದು ಅಸಮಧಾನವನ್ನು ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರು ಕೂಡ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದ ಬಗ್ಗೆ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈಗ ಕಾಂಗ್ರೆಸ್‍ನ ಹಲವು ಶಾಸಕರು ಅವರನ್ನು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ