ಬೆಂಗಳೂರು, ಜೂ.23- ಪ್ರಧಾನಿ ಫಸಲ್ಭಿಮಾ ಯೋಜನೆ ತಿದ್ದುಪಡಿ ಮಾಡಿ ಎಲ್ಲ ರೈತರಿಗೆ ಅನುಕೂಲವಾಗುವಂತೆ ಜಾರಿ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ 78 ಲಕ್ಷ ರೈತರು ವ್ಯವಸಾಯ ಚಟುವಟಿಕೆ ನಡೆಸುತ್ತಿದ್ದು, 12 ಲಕ್ಷ ರೈತರು ಮಾತ್ರ ಪ್ರಧಾನಿ ಫಸಲ್ ಭಿಮಾ ಯೋಜನೆಗೆ ಬೆಳೆ ವಿಮೆ ಮಾಡಿಸಿದ್ದಾರೆ. 42 ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಅದರಲ್ಲಿ 23 ಬೆಳೆಗಳಿಗೆ ಮಾತ್ರ ಬೆಳೆ ವಿಮೆ ಮಾಡಲಾಗಿದೆ.
ಕಬ್ಬು, ರೇಷ್ಮೆ, ಅಡಿಕೆ ಮತ್ತಿತರ ಬೆಳೆಗಳಿಗೆ ಏಕೆ ಬೆಳೆ ವಿಮೆ ಜಾರಿ ಮಾಡಿಲ್ಲ. ಈ ಬೆಳೆಗಳಿಗೆ ಮಳೆ ಹಾನಿ, ಬರಗಾಲ, ಪ್ರಕೃತಿ ವಿಕೋಪಕ್ಕೆ ಒಳಗಾದರೆ ಬೆಳೆನಷ್ಟ ಪರಿಹಾರ ಬರುವುದಿಲ್ಲ. ಬೆಳೆ ವಿಮೆಯೂ ಇಲ್ಲ. ಇಂತಹ ರೈತರು ಬ್ಯಾಂಕ್ನಲ್ಲಿ ಬೆಳೆ ಸಾಲ ಮಾಡಿದರೆ ಯಾವ ರೀತಿ ತೀರಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರಧಾನಿ ಫಸಲ್ ಭಿಮಾ ಯೋಜನೆಯನ್ನು ಇಂತಹ ಪ್ರದೇಶಕ್ಕೆ ನಿರ್ದಿಷ್ಟವಾದ ಬೆಳೆಗಳಿಗೆ ಮಾತ್ರ ಜಾರಿ ಮಾಡಿರುವುದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ಪ್ರಧಾನಿ ಫಸಲ್ ಭಿಮಾ ಯೋಜನೆಯನ್ನು ತಿದ್ದುಪಡಿ ಮಾಡಿ ಎಲ್ಲರಿಗೂ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಕಬ್ಬು ಬೆಳಗಾರರಿಗೆ ಬೆಳೆ ವಿಮೆ ಜಾರಿ ಮಾಡಿ ವಿಮಾ ಕಂತು ಹಣವನ್ನು ರೈತರ ಜತೆ ಕಬ್ಬು ಖರೀದಿ ಒಪ್ಪಂದ ಮಾಡಿಕೊಂಡ ಸಕ್ಕರೆ ಕಾರ್ಖಾನೆಗಳು ಅರ್ಧ ಭಾಗ, ರೈತರು ಅರ್ಧ ಭಾಗ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಕಬ್ಬು ಬೆಳೆ ಹಾಳಾದಾಗ ವಿಮೆ ಸಿಗುತ್ತದೆ.
ರಾಜ್ಯ ಕೃಷಿ ಇಲಾಖೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆ ಮತ್ತು ಫಸಲ್ ಬೆಳೆ ವಿಮಾ ಇಲಾಖೆಗಳು ಸಭೆ ನಡೆಸಿ ಕೂಡಲೇ ಚರ್ಚೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.