ಪುಣೆ, ಜೂ.23- ಆಹಾರ ಭದ್ರತೆ ಇಲ್ಲದೆ ದೇಶದ ಸುರಕ್ಷತೆ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. ಪುಣೆಯಲ್ಲಿ ಮುಕ್ತಾಯಗೊಂಡ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿ ಮಾಡುವ ಕುರಿತ ರಾಷ್ಟ್ರೀಯ ಸಮಾಲೋಚನೆ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರವನ್ನು ಸುಸ್ಥಿರಗತಿಯ ನಿರಂತರ ಪ್ರಕ್ರಿಯೆ ಮತ್ತು ಲಾಭದಾಯಕವನ್ನಾಗಿ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಆದ್ಯತೆಯಾಗಬೇಕು ಎಂದರು. ಆಹಾರ ಭದ್ರತೆಗೂ ದೇಶದ ಸುರಕ್ಷತೆಗೂ ಒಂದಕ್ಕೊಂದು ಸಂಬಂಧವಿದೆ. ಆಹಾರ ಭದ್ರತೆಯು ರಾಷ್ಟ್ರದ ಸುರಕ್ಷತೆಗೆ ಸಂಬಂಧಪಟ್ಟ ವಿಷಯವೂ ಆಗಿದೆ ಎಂದು ಅವರು ಹೇಳಿದರು.
ನಮ್ಮ ಅನ್ನದಾತರ ಬಗ್ಗೆ ನಾವು ಸಕಾರತ್ಮಕ ಚಿಂತನೆ ಮಾಡುವ ಕಾಲ ಬಂದಿದೆ. ಕೃಷಿ ಕ್ಷೇತ್ರವನ್ನು ಲಾಭದಾಯಕ ವಲಯವನ್ನಾಗಿ ನಾವು ಮಾಡಬೇಕು. ಇದನ್ನು ನಾವು ಮಾಡದಿದ್ದರೆ ಹೆಚ್ಚು ಜನರನ್ನು ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಪ್ರಮುಖವಾಗಿ ಯುವಕರು ರೈತರಾಗುವುದಕ್ಕೆ ಮುಂದಾಗದೇ ಇರುವುದು ಒಂದು ಸಮಸ್ಯೆಯಾಗಿದೆ ಎಂದು ಅವರು ವಿಷಾದಿಸಿದರು.