ರಾಂಚಿ, ಜೂ.22-ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಹಳ್ಳಿಗೆ ಬಂದಿದ್ದ ಸರ್ಕಾರೇತರ ಸಂಸ್ಥೆ(ಎನ್ಜಿಒ)ಯೊಂದರ ಐವರು ಮಹಿಳೆಯರಿಗೆ ದುಷ್ಕರ್ಮಿಗಳ ಗುಂಪೆÇಂದು ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿರುವ ನೀಚ ಕೃತ್ಯ ಜಾರ್ಖಂಡ್ನಲ್ಲಿ ನಡೆದಿದೆ.
ಕುಂತಿ ಜಿಲ್ಲೆಯ ಚೋಚಾಂಗ್ ಗ್ರಾಮದಲ್ಲಿ ವಲಸೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಎನ್ಜಿಒದ 11 ಜನರ ಮಹಿಳೆ ತಂಡ ಬೀದಿ ನಾಟಕ ಪ್ರದರ್ಶಿಸಲು ತೆರಳಿತ್ತು. ಇವರಲ್ಲಿ ಐವರು ಮಹಿಳೆಯರನ್ನು ದುಷ್ಕರ್ಮಿಗಳು ಹತ್ತಿರದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಈ ಕೃತ್ಯ ನಡೆಸಿದೆ ಎಂದು ಉಪ ಪೆÇಲೀಸ್ ಮಹಾ ನಿರೀಕ್ಷಕ ಅಮೋಲ್ ವಿ. ಹೋಮ್ಕೆರ್ ತಿಳಿಸಿದ್ದಾರೆ.
ಈ ಗ್ರಾಮದೊಳಗೆ ಹೊರಗಿನವರಿಗೆ ಪ್ರವೇಶ ನಿರ್ಬಂಧವಿದೆ. ಇದನ್ನು ತಿಳಿಯದೇ ಗ್ರಾಮದೊಳಗೆ ಪ್ರವೇಶಿಸಿದ ಸಾಮಾಜಿಕ ಕಾರ್ಯಕರ್ತೆಯರನ್ನು ಅಡ್ಡಗಟ್ಟಿದ 10ಕ್ಕೂ ಹೆಚ್ಚು ಜನರಿದ್ದ ಗುಂಪು ಕಾಡಿಗೆ ಕರೆದೊಯ್ದು ಬಂದೂಕು ತೋರಿಸಿ ಗ್ಯಾಂಗ್ರೇಪ್ ನಡೆಸಿದೆ.
ಈ ಗ್ರಾಮದಲ್ಲಿ ಪಥಲ್ಗರ್ಹಿ (ದೊಡ್ಡ ಬಂಡೆಗಳ ಮೇಲೆ ಗ್ರಾಮದ ವಿವಿಧ ನಿಯಮಗಳು ಮತ್ತು ಕಟ್ಟುಪಾಡುಗಳನ್ನು ಕೆತ್ತುವ ಹಾಗೂ ಹೊರಗಿನವರಿಗೆ ಗ್ರಾಮದಲ್ಲಿ ಪ್ರವೇಶ ನಿರ್ಬಂಧಿಸುವ) ಪದ್ಧತಿ ಇದೆ. ಇದನ್ನು ಆಚರಿಸುತ್ತಿರುವ ಯುವಕರು ಮತ್ತು ಪುರುಷರ ಗುಂಪೆÇಂದು ಈ ಕೃತ್ಯದ ಹಿಂದೆ ಇದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು, ಎಂಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಕೃತ್ಯದ ಬಗ್ಗೆ ತನಿಖೆ ಮುಂದುವರಿದಿದೆ.