ಸಚಿವ ಡಿ.ಕೆ.ಶಿವಕುಮಾರ್ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

 

ಬೆಂಗಳೂರು, ಜೂ.21-ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಬಗ್ಗೆ ನನ್ನ ಬಳಿಯೂ ಡೈರಿ ಇದೆ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು ಎಂದು ಟಾಂಗ್ ನೀಡಿದ್ದಾರೆ.
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‍ನ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಡೈರಿ ಇದ್ದರೆ ಅದನ್ನು ಬಿಡುಗಡೆ ಮಾಡಲು ಡಿ.ಕೆ.ಶಿವಕುಮಾರ್ ಇನ್ನು ಏಕೆ ಮೀನಾಮೇಷ ಎಣಿಸುತ್ತಿದ್ದಾರೆ. ಅವರನ್ನು ಯಾವ ಕೈಗಳು ಕಟ್ಟಿ ಹಾಕಿವೆ ಎಂದು ಪ್ರಶ್ನಿಸಿದರು.

ಐಟಿ ಅಧಿಕಾರಿಗಳು ಇವರ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಮೇಲ್ನೋಟಕ್ಕೆ ಅಕ್ರಮ ವ್ಯವಹಾರ ನಡೆಸಿರುವುದು ಹಾಗೂ ಹವಾಲಾ ದಂಧೆಯಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಆದಾಯ ತೆರಿಗೆ ಇಲಾಖೆ ಒಂದು ಸ್ವಾಯತ್ತ ಸಂಸ್ಥೆ. ಇದರಲ್ಲಿ ಯಾವುದೇ ಸರ್ಕಾರಗಳು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಹಿಂದೆ ಯುಪಿಎ ಸರ್ಕಾರ 10 ವರ್ಷ ಆಡಳಿತ ನಡೆಸಿದಾಗ ದೇಶದ ನಾನಾ ಕಡೆ ಇಡಿ, ಐಟಿ ಹಾಗೂ ಸಿಬಿಐ ಅಧಿಕಾರಿಗಳು ವಿರೋಧ ಪಕ್ಷದವರ ಮೇಲೆ ದಾಳಿ ನಡೆಸಿದ್ದರು. ಹಾಗಾದರೆ ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇತ್ತೇ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಐಟಿ ಇಲಾಖೆ ಕಾನೂನಿನ ಪ್ರಕಾರವೇ ತನಿಖೆ ನಡೆಸುತ್ತದೆ. ತಮ್ಮ ಮೇಲಿರುವ ಆರೋಪಗಳನ್ನು ಮುಚ್ಚಿ ಹಾಕಲು ಇಂತಹ ಆರೋಪಗಳನ್ನು ಕೆಲವರು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಹೆಚ್ಚಿನ ಮಹತ್ವ ಬೇಡ ಎಂದು ಸದಾನಂದ ಗೌಡ ಮನವಿ ಮಾಡಿದರು.
ಅಷ್ಟಕ್ಕೂ ಬಿಜೆಪಿಯವರ ಡೈರಿಯನ್ನು ಶಿವಕುಮಾರ್‍ಗೆ ಯಾರು ಕೊಟ್ಟಿದ್ದರು ಎಂಬುದರ ಬಗ್ಗೆ ತನಿಖೆ ನಡೆದರೆ ಇನ್ನಷ್ಟು ಸ್ಫೋಟಕ ವಿಷಯಗಳು ಹೊರಬೀಳಲಿವೆ. ತಮ್ಮ ಮೇಲಿನ ಆರೋಪಗಳನ್ನು ಮರೆಮಾಚಲು ಕೆಲವರು ಇಂತಹ ಕಟ್ಟು ಕಥೆ ಸೃಷ್ಟಿಸುತ್ತಿದ್ದಾರೆ. ಇವು ಗಾಳಿ ಬಂದಷ್ಟೇ ವೇಗವಾಗಿ ಮರೆಯಾಗುತ್ತವೆ ಎಂದು ಕುಹಕವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ