ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೀದಿದೀಪಗಳ ಗುತ್ತಿಗೆದಾರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ; ಸಂಜೆ ನಗರದ ರಸ್ತೆಗಳು ಕತ್ತಲಲ್ಲಿ

 

ಬೆಂಗಳೂರು, ಜೂ.20- ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೀದಿದೀಪಗಳ ಗುತ್ತಿಗೆದಾರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿರುವುದರಿಂದ ಸಂಜೆ ನಗರದ ರಸ್ತೆಗಳು ಕತ್ತಲಲ್ಲಿ ಮುಳುಗಲಿವೆ.
ಕಳೆದ ಹತ್ತು ತಿಂಗಳಿಂದ ಬೀದಿ ದೀಪಗಳ ಗುತ್ತಿಗೆದಾರರಿಗೆ ಬಿಬಿಎಂಪಿ ಬಿಲ್ ಬಿಡುಗಡೆ ಮಾಡಿಲ್ಲ. ಹಾಗಾಗಿ ಇಂದಿನಿಂದ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಗುತ್ತಿಗೆದಾರರು ಧರಣಿ ಪ್ರಾರಂಭಿಸಿದ್ದಾರೆ.

198 ವಾರ್ಡ್‍ಗಳಲ್ಲಿ ಬೀದಿದೀಪ ನಿರ್ವಹಣೆ ಮಾಡಲಾಗುತ್ತಿದೆ. 2017ರ ಡಿಸೆಂಬರ್‍ನಿಂದ ನಮಗೆ ಬಿಲ್ ಪಾವತಿ ಮಾಡಿಲ್ಲ. ವಿವಿಧ ನೆಪಗಳನ್ನೊಡ್ಡಿ ಪಾಲಿಕೆಯು ಬಿಲ್ ತಡೆ ಹಿಡಿದಿದೆ ಎಂದು ಗುತ್ತಿಗೆದಾರರು ಆರೋಪಿಸಿದರು.
ಮೇಯರ್ ಸಂಪತ್‍ರಾಜ್ ಅವರು ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳು ಅವರ ಮಾತಿಗೆ ಬೆಲೆ ಕೊಟ್ಟಿಲ್ಲ. ನಮಗೆ ಬಿಲ್ ಬಿಡುಗಡೆಯಾಗಿಲ್ಲ. ಸಾಲ-ಸೋಲ ಮಾಡಿ ಕೆಲಸ ನಿರ್ವಹಿಸುತ್ತೇವೆ. ಬಿಲ್ ಬಿಡುಗಡೆ ಮಾಡದಿದ್ದರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದೇವೆ. 30 ಕೋಟಿಯಷ್ಟು ಬಿಲ್ ಬಾಕಿ ಇದೆ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಬಿಲ್ ಬಿಡುಗಡೆಯಾಗುವವರೆಗೂ ಬೀದಿದೀಪ ನಿರ್ವಹಣೆ ಮಾಡುವ ಸಿಬ್ಬಂದಿಯೊಂದಿಗೆ ನಾವು 150 ಗುತ್ತಿಗೆದಾರರು ಇಂದಿನಿಂದ ಧರಣಿ ನಡೆಸುತ್ತೇವೆ. ಸಂಜೆಯೊಳಗೆ ಬಿಲ್ ಪಾವತಿಸದಿದ್ದರೆ ಇಂದಿನಿಂದ ಬೀದಿದೀಪ ಹಾಕುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಬಿಬಿಎಂಪಿಯೇ ನೇರ ಹೊಣೆ ಎಂದು ಗುತ್ತಿಗೆದಾರರು ಎಚ್ಚರಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 4.5 ಲಕ್ಷ ಬೀದಿ ದೀಪಗಳಿದ್ದು, ಇದನ್ನು ನಾವು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಮೇಯರ್ ಬಳಿ ತೋಡಿಕೊಂಡಿದ್ದೇವೆ. ಮೇಯರ್ ಅವರ ಮಾತಿಗೂ ಆಯುಕ್ತರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಹಾಗಾಗಿ ಇಂದು ಸಂಜೆಯಿಂದಲೇ ಬೀದಿ ದೀಪ ಹಾಕುವುದನ್ನು ನಾವು ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಗುತ್ತಿಗೆದಾರರ ಮುಷ್ಕರದಿಂದಾಗಿ ಇಂದು ಸಂಜೆಯಿಂದ ನಗರದಲ್ಲಿ ಬೀದಿ ದೀಪಗಳು ಉರಿಯುವುದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ