ಪ್ಯಾರಿಸ್, ಜೂ.10-ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಸದೃಢ ಅಭಿವೃದ್ಧಿ ಸಹಭಾಗಿತ್ವ ಮತ್ತು ಪಾಲುದಾರಿಕೆಗೆ ಉಭಯ ದೇಶಗಳು ಶ್ರಮಿಸುತ್ತಿವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ, ಶುದ್ಧ ಇಂಧನ ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡು ದೇಶಗಳ ನಡುವೆ ಮತ್ತಷ್ಟು ಸದೃಢ ಸಹಭಾಗಿತ್ವಕ್ಕೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಸಂಬಂಧ ಫ್ರಾನ್ಸ್ನ ಉನ್ನತ ನಾಯಕರನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ಸುಷ್ಮಾ ತಿಳಿಸಿದ್ದಾರೆ.
ನಾಲ್ಕು ರಾಷ್ಟ್ರಗಳ ಪ್ರವಾಸದ ದ್ವಿತೀಯ ಹಂತವಾಗಿ ನಿನ್ನೆ ಇಟಲಿಯ ರೋಮ್ನಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಆಗಮಿಸಿದ ಅವರು ಫ್ರೆಂಚ್ ಅಧ್ಯಕ್ಷ ಎಮ್ಮಾನ್ಯುಯಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವರ್ಷ ಮಾರ್ಚ್ನಲ್ಲಿ ಭಾರತ ಭೇಟಿ ವೇಳೆ ಫ್ರಾನ್ಸ್ ಅಧ್ಯಕ್ಷರ ನಡುವೆ ಏರ್ಪಟ್ಟ ಒಪ್ಪಂದಗಳ ನಂತರ ಕಂಡುಬಂದ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆದವು.
ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ಯೆವೆಸ್ ಲಾ ಡ್ರುಯಾನ್ ಅವರನ್ನು ಸಹ ಸುಷ್ಮಾ ಭೇಟಿ ಮಾಡಿದ ದ್ವಿಪಕ್ಷೀಯ ಸಂಬಂಧಗಳ ಕುರಿತು ವ್ಯಾಪಕ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.