ತುಮಕೂರು, ಜೂ.19-ದೇವರಾಯನದುರ್ಗ ಅರಣ್ಯದ ತಪ್ಪಲಿನಲ್ಲಿರುವ ಬೆಳಗುಂಬ ಬಳಿಯ ಲಂಬಾಣಿ ತಾಂಡ್ಯಾಕ್ಕೆ ನುಗ್ಗಿದ ಚಿರತೆಯೊಂದು ಹಸು ಹಾಗೂ ಮೇಕೆಯನ್ನು ತಿಂದಿರುವುದರಿಂದ ನಾಗರಿಕರು ಆತಂಕಗೊಂಡಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಳಗುಂಬ ಬಳಿ ಇರುವ ಬೆಟ್ಟದ ಸಾಲಿನಲ್ಲಿ ಚಿರತೆ, ಕರಡಿ, ತೋಳಗಳು ವಾಸಿಸುತ್ತಿದ್ದು, ದಿನನಿತ್ಯ ರೈತರಿಗೆ ಸೇರಿದ ಜಾನುವಾರುಗಳನ್ನು ತಿಂದು ತೇಗುತ್ತಿರುವುದರಿಂದ ರೈತರ ಬದುಕು ಶೋಚನೀಯವಾಗಿದೆ.
ರಾತ್ರಿ ಲಂಬಾಣಿ ತಾಂಡ್ಯಾಕ್ಕೆ ನುಗ್ಗಿದ ಚಿರತೆಯೊಂದು ಬೆಳಗಾಗುವಷ್ಟರಲ್ಲಿ ಹಸು ಹಾಗೂ ಮೇಕೆಯನ್ನು ತಿಂದು ಪರಾರಿಯಾಗಿದೆ. ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಚಿರತೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಅಧಿಕಾರಿಗಳು ತಾಂಡ್ಯಕ್ಕೆ ಆಗಮಿಸಿದ್ದು, ಚಿರತೆಗಾಗಿ ಶೋಧ ಕೈಗೊಂಡಿದ್ದಾರೆ.