ಕೊಳ್ಳೇಗಾಲ, ಜೂ.18- ಮನೆಯಲ್ಲಿ ಮಲಗಿದ್ದ ಟ್ರಾಕ್ಟರ್ ಚಾಲಕನನ್ನು ಪರಿಚಯಸ್ಥರೇ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಿಸಾಡಿ ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಉಪ್ಪಾರ ಜನಾಂಗದ ಶಂಕರಶೆಟ್ಟಿ ಎಂಬುವವರ ಕಿರಿಯ ಮಗ ನಾಗರಾಜು ಎಂಬಾತನೆ ಕೊಲೆಯಾದ ದುರ್ದೈವಿಯಾಗಿದ್ದಾನೆ.
ನಾಗರಾಜುವಿನ ತಂದೆ-ತಾಯಿ ದೇವಸ್ಥಾನಗಳಲ್ಲಿ ದೂಪ ಮಾರುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಅವರು ಆದಿಚುಂಚನಗಿರಿ ದೇವಸ್ಥಾನಕ್ಕೆ ದೂಪ ಮಾರಲು ಹೋಗಿದ್ದರು.
ನಾಗರಾಜು ಅಣ್ಣಂದಿರಾದ ಮೂರ್ತಿ ಹಾಗೂ ಪ್ರಕಾಶ್ ಮೂವರು ವೃತ್ತಿಯಲ್ಲಿ ಟ್ರಾಕ್ಟರ್ ಚಾಲಕರು. ನಾಗರಾಜು ಎಂದಿನಂತೆ ಶನಿವಾರ ಸಂಜೆ ಟ್ರಾಕ್ಟರ್ನಲ್ಲಿ ಉಳುಮೆ ಮಾಡಿ ಬಂದು ರಾತ್ರಿ ಊಟ ಮಾಡಿ ತನ್ನ ಅಣ್ಣಂದಿರೊಡನೆ ಮಲಗಿದ್ದರು.
ರಾತ್ರಿ 10 ಗಂಟೆಯ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಮೃತನ ದೊಡ್ಡಪ ಮಸಣ ಶೆಟ್ಟಿಯ ಮಗ ನಿಂಗರಾಜು, ಹಾಗೂ ಅದೇ ಗ್ರಾಮದ ನಿಂಗಶೆಟ್ಟಿ ಮಗ ಚಂದ್ರ ಯರಿಯೂರಿನ ರಂಗಸ್ವಾಮಿ ಮಗ ರಾಜು ಎಂಬುವವರು ಬಂದು ಬಾಗಿಲು ಬಡಿದಿದ್ದಾರೆ.
ಮೂರ್ತಿ ಹಾಗೂ ಪ್ರಕಾಶ್ ಹೊರ ಬಂದು ಬಾಗಿಲು ತೆರೆದಿದ್ದಾರೆ. ನಂತರ ನಾಗರಾಜುವನ್ನು ಹೊರಗಡೆ ಹೋಗಿ ಬರುವಂತೆ ತಾವು ತಂದಿದ್ದ ಬೈಕ್ಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಕನಕಗಿರಿ ದೇವಸ್ಥಾನದ ಕಡೆ ಕರೆದುಕೊಂಡು ಹೋದ ಮೂವರು ನಾಗರಾಜುವನ್ನು ಕೊಲೆ ಮಾಡಿ ಕೊಳ್ಳೆಗಾಲ -ಮಲೆ ಮಹದೇಶ್ವರ ಬೆಟ್ಟ ರಸ್ತೆಯಿಂದ ರಾಜೂಗೌಡರ ಜಮೀನಿಗೆ ತೆರಳುವ ಚಾನಲ್ ರಸ್ತೆಯಲ್ಲಿ ಬಿಸಾಡಿದ್ದಾರೆ.
ಬೆಳಗಿನ ಜಾವ 3.30 ರ ಸಮಯದಲ್ಲಿ ಮೃತನ ಸಹೋದರ ಪ್ರಕಾಶ್ ಮೊಬೈಲ್ ಗೆ ಕರೆ ಮಾಡಿ ನಿನ್ನ ತಮ್ಮನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗ ಬೇಕು ಬಾ ಎಂದು ಕರೆದಿದ್ದಾನೆ. ಸ್ಥಳಕ್ಕೆ ಬಂದ ನಂತರ ಶವ ತೊರಿಸಿ ನಿನ್ನ ತಮ್ಮ ಸತ್ತು ಹೋಗಿದ್ದಾನೆ ಎಂದು ಹೇಳಿ ಪರಾರಿಯಾಗಿದ್ದಾನೆ.
ಈ ಸಂಬಂಧ ಮೃತನ ಸಹೋದರ ಪ್ರಕಾಶ್ ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.