ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವು

 

ತುಮಕೂರು,ಜೂ.16-ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಪ್ರಸನ್ನಕುಮಾರ್(55) ಮೃತಪಟ್ಟ ದುರ್ದೈವಿ.
ಇವರು ಚೇಳೂರಿನ ಕಸಬಾದಲ್ಲಿ ಗ್ರಾಮ ಲೆಕ್ಕಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ತುಮಕೂರಿಗೆ ಹೊರಟಿದ್ದರು. ಮಾರ್ಗಮಧ್ಯೆ ಹಲವು ಪರಿಚಿತರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ.
ಈ ವೇಳೆ ಭೀಮಸಂದ್ರದಲ್ಲಿರುವ ಗಾರ್ಮೆಂಟ್ಸ್ ಪಕ್ಕ ನೂರಾರು ವರ್ಷದ ಕಿರಿದಾದ ಸೇತುವೆ ಬಳಿಯ ರಾಷ್ಟ್ರೀಯ 206ರ ಬಳಿ ತುಮಕೂರು ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರು ಪ್ರಸನ್ನ ಕುಮಾರ್ ಅವರ ಬೈಕ್‍ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ಪ್ರಸನ್ನಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೃತ್ತ ನಿರೀಕ್ಷಕರಾದ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಸಬ್‍ಇನ್‍ಸ್ಪೆಕ್ಟರ್ ಶಿವರಾಜ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಪವಿಭಾಗಾಧಿಕಾರಿಗಳು, ಗುಬ್ಬಿ ತಹಸೀಲ್ದಾರ್, ಕಂದಾಯ ಇಲಾಖೆ ನಿರೀಕ್ಷಕರು, ಸಿಬ್ಬಂದಿಗಳು ಚೇಳೂರಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರು , ಸದಸ್ಯರು, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.
ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ