ವಾಷಿಂಗ್ಟನ್, ಜೂ.16- ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ರಷ್ಯಾದ 11 ನಗರಗಳಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ. ಯಾವುದೇ ಸಂದರ್ಭದಲ್ಲಿ ಉಗ್ರರ ಆಕ್ರಮಣ ನಡೆಯಬಹುದಾಗಿದೆ ಎಂದು ಹೇಳಿರುವ ಇಲಾಖೆಯ ಉನ್ನತಾಧಿಕಾರಿಗಳು ರಷ್ಯಾ ಪ್ರವಾಸ ಕೈಗೊಳ್ಳುವ ಅಮೆರಿಕನ್ನರಿಗೆ ಎಚ್ಚರಿಕೆಯಿಂದ ಇರುವಂತೆಯೂ ಸಲಹೆ ಮಾಡಿದ್ದಾರೆ.
ರಷ್ಯಾಗೆ ತೆರಳಲು ಉದ್ದೇಶಿಸಿರುವ ಅಮೆರಿಕನ್ನರು ತಮ್ಮ ಪ್ರವಾಸವನ್ನು ಮರು ಪರಿಶೀಲಿಸುವುದು ಈ ಸಂದರ್ಭದಲ್ಲಿ ಸೂಕ್ತ ಎಂಬ ನಿರ್ದೇಶನವನ್ನೂ ನೀಡಲಾಗಿದೆ.
ವ್ಯಾಪಕ ಭದ್ರತೆ :
ಫುಟ್ಬಾಲ್ ವಿಶ್ವ ಮಹಾಸಮರದ ವೇಳೆ ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಬಗ್ಗೆ ಈಗಾಗಲೇ ಸುಳಿವು ಲಭಿಸಿದ್ದು, ರಷ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಉಗ್ರಗಾಮಿಗಳ ಗುರಿಯಾಗಿರುವ ಕ್ರೀಡಾಂಗಣಗಳು, ಕ್ರೀಡಾಭಿಮಾನಿಗಳು ವಾಸ್ತವ್ಯ ಹೂಡಿರುವ ಸ್ಥಳಗಳು, ಪ್ರವಾಸಿ ತಾಣಗಳು, ಸಾರಿಗೆ ಸೌಲಭ್ಯ ಕೇಂದ್ರಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಭೂತಪೂರ್ವ ಬಿಗಿ ಭದ್ರತೆ ಒದಗಿಸಲಾಗಿದೆ.